ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಿಗೆ ಹೈಕೋರ್ಟ್ ಡಿಫಾಲ್ಟ್ ಜಾಮೀನು ಮಂಜೂರು ಮಾಡಿದ್ದು, ಕೊಲೆ ಆರೋಪಿಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ಎ5 ಆಗಿದ್ದ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರುಗೆ ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಇಂದು ಹೈಕೋರ್ಟ್ ಕೊಲೆ ಪ್ರಕರಣದ ಪ್ರಮುಖ ಆರೋಪಿಜಗ್ಗ ಅಲಿಯಾಸ್ ಜಗದೀಶ್ ಸೇರಿದಂತೆ ಇತರ ಆರೋಪಿಗಳಿಗೆ ಡಿಫಾಲ್ಟ್ ಜಾಮೀನು ಮಂಜೂರು ಮಾಡಿದೆ.
ಪೊಲೀಸರ ಲೋಪದಿಂದಾಗಿ ಕೊಲೆ ಆರೋಪಿಗಳಿಗೆ ಜಾಮೀನು ಸಿಕ್ಕಂತಾಗಿದೆ. ಪೊಲೀಸರು ವಿಳಂಬವಾಗಿ ಆರೋಪ ಪಟ್ಟಿ ಸಲ್ಲಿಸಿದ ಕಾರಣಕ್ಕೆ ಹೈಕೋರ್ಟ್ ನ್ಯಾ.ಸುನೀಲ್ ದತ್ ಯಾದವ್ ಅವರಿದ್ದ ಪೀಠ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿ ಗಗ್ಗ ಅಲಿಯಾಸ್ ಜಗದೀಶ್, ಕೆ.ಕಿರಣ್, ಬಿ.ವಿಮಲ್ ರಾಜ್ ಹಾಗೂ ಮದನ್ ಗೆ ಜಾಮೀನು ಮಂಜೂರಾಗಿದೆ. ಕೊಲೆ ಕೇಸ್ ನಲ್ಲಿ 90 ದಿನಗಳಲ್ಲಿ ಚಾರ್ಜ್ ಸೀಟ್ ಸಲ್ಲಿಕೆಯಾಗಬೇಕು. ಆದರೆ ಕೋಕಾ ಕಾಯ್ದೆ ಅನ್ವಯಿಸಿ ಹೆಚ್ಚುವರಿ ಸಮಯವನ್ನು ಪೊಲೀಸರು ಪಡೆದಿದ್ದರು. ಆದರೆ ಕೋಕಾ ಕಾಯ್ದೆ ಅನ್ವಯಿಸಿದ್ದನ್ನು ಹೈಕೋರ್ಟ್ ಡಿ.19ರಂದು ರದ್ದುಪಡಿಸಿತ್ತು.
ಕೋಕಾ ಕಾಯ್ದೆಯಡಿ ಚಾರ್ಜ್ ಶೀಟ್ ಸಲ್ಲಿಸಲು ಹೆಚ್ಚುವರಿ ಸಮಯವೂ ರದ್ದಾಗಿತ್ತು.
ಈ ಹಿನ್ನೆಲೆಯಲ್ಲಿ ಆರೋಪಿಗಳು ಡಿ.22ರಂದು ಡಿಫಾಲ್ಟ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆರೋಪಿಗಳ ಅರ್ಜಿ ಬಳಿಕ ಅದೇ ದಿನ ಸಂಜೆ ಚಾರ್ಜ್ ಶೀಟ್ ದಾಖಲಾಗಿತ್ತು. ಮ್ಯಾಜಿಸ್ಟ್ರೇಟ್ ಕೋರ್ಟ್ ಡಿಫಾಲ್ಟ್ ಜಾಮೀನು ನಿರಾಕರಿಸಿತ್ತು. ಆರೋಪಿಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ 1 ಲಕ್ಷ ಬಾಂಡ್, 1ಶ್ಯೂರಿಟಿ, ವಿಚಾರಣೆಗೆ ಸಹಕರಿಸಬೇಕು, ಸಾಕ್ಷ್ಯಾಧಾರಗಳನ್ನು ನಾಶಪಡಿಸಬಾರದು, ಬೆದರಿಕೆ ಹಾಕುವಂತಿಲ್ಲ ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಅಲ್ಲದೇ ಆರೋಪಿಗಳ ಜಾಮೀನು ಸುಪ್ರೀಂ ಕೋರ್ಟ್ ಆದೇಶಕ್ಕೆ ಒಳಪಡುತ್ತದೆ ಎಂದು ತಿಳಿಸಿದೆ.

