ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಮೋಡಗಳು ಈಗ ನೇರವಾಗಿ ಭಾರತದ ಸಾಮಾನ್ಯ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿವೆ. ಔಷಧ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಗಳ ಬೆಲೆ ಶೇ. 20ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಸರ್ಕಾರವು ಔಷಧಗಳ ಪೂರೈಕೆಯನ್ನು ಸತತವಾಗಿ ಕಾಯ್ದುಕೊಳ್ಳಲು ಈ ತಾತ್ಕಾಲಿಕ ಬೆಲೆ ಏರಿಕೆಯ ಮೊರೆ ಹೋಗುತ್ತಿದ್ದು, ಜನಸಾಮಾನ್ಯರಿಗೆ ಇದು ಭಾರಿ ಆರ್ಥಿಕ ಹೊರೆಯಾಗಿ ಪರಿಣಮಿಸಲಿದೆ. ಪೂರೈಕೆ ಸರಪಳಿ ಸುಧಾರಿಸುವವರೆಗೆ ಅಂದರೆ ಸುಮಾರು ಮೂರು ತಿಂಗಳ ಕಾಲ ಈ ದರ ಏರಿಕೆ ಮುಂದುವರಿಯುವ ಅಂದಾಜಿದೆ.
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಇನ್ನೂ ಕಡಿಮೆಯಾಗಿಲ್ಲ. ಇರಾನ್ ಮತ್ತು ಅಮೆರಿಕ ನಡುವೆ ಸದ್ಯ ಕದನ ವಿರಾಮವಿದ್ದರೂ, ಜಾಗತಿಕ ವಾಣಿಜ್ಯದ ಮೇಲೆ ಇದರ ಪರಿಣಾಮ ಬೀರಿದೆ. ಗ್ಯಾಸ್ ಮತ್ತು ಇತರ ಇಂಧನಗಳ ಬೆಲೆ ಏರಿಕೆಯ ಬೆನ್ನಲ್ಲೇ, ಈಗ ಔಷಧಗಳ ಬೆಲೆಯೂ ಏರಿಕೆಯಾಗುವ ಲಕ್ಷಣಗಳು ಕಾಣುತ್ತಿವೆ. ಕ್ಯಾನ್ಸರ್ ಸೇರಿದಂತೆ ಅನೇಕ ಜೀವ ರಕ್ಷಕ ಔಷಧಗಳ ಬೆಲೆ ಗಗನಕ್ಕೇರಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಔಷಧ ತಯಾರಿಕಾ ವೆಚ್ಚ ದಿಢೀರ್ ಹೆಚ್ಚಾಗಿದೆ. ಪೂರೈಕೆಯನ್ನು ಸುಗಮವಾಗಿಡಲು ಸರ್ಕಾರವು ಅನಿವಾರ್ಯವಾಗಿ ಈ ನಿರ್ಧಾರ ಕೈಗೊಳ್ಳುತ್ತಿದೆ ಎನ್ನಲಾಗಿದೆ.
ಯಾವ ಔಷಧಗಳ ಬೆಲೆ ಎಷ್ಟು ಏರಿಕೆ? ಕ್ಯಾನ್ಸರ್ ಔಷಧಗಳು, ದಿನಬಳಕೆಯ ಆ್ಯಂಟಿಬಯೋಟಿಕ್ಸ್‌ಗಳು ಮತ್ತು ಇಂಜೆಕ್ಷನ್‌ಗಳ ಬೆಲೆಯನ್ನು ಶೇ. 10 ರಿಂದ ಶೇ. 20 ರಷ್ಟು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಆದರೆ ಇದು ಶಾಶ್ವತ ಏರಿಕೆಯಲ್ಲ; ಕೇವಲ ಮೂರು ತಿಂಗಳವರೆಗೆ ಮಾತ್ರ ಈ ತಾತ್ಕಾಲಿಕ ಬೆಲೆ ಏರಿಕೆ ಜಾರಿಯಲ್ಲಿರುವ ಸಾಧ್ಯತೆಯಿದೆ. ಜಾಗತಿಕ ಪೂರೈಕೆ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದ ನಂತರ ಬೆಲೆಗಳು ಇಳಿಕೆಯಾಗಲಿವೆ.
ಬೆಲೆ ಏರಿಕೆಗೆ ಕಾರಣವೇನು? ಔಷಧ ತಯಾರಿಕೆಯಲ್ಲಿ ‘ಸಾಲ್ವೆಂಟ್’ (Solvents) ಎಂಬ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇವುಗಳ ತಯಾರಿಕೆಗೆ ಗಲ್ಫ್ ರಾಷ್ಟ್ರಗಳಿಂದ ಬರುವ ಕಚ್ಚಾ ತೈಲ ಮತ್ತು ಗ್ಯಾಸ್ ಅತ್ಯಗತ್ಯ. ಅಲ್ಲಿನ ಯುದ್ಧದ ವಾತಾವರಣದಿಂದಾಗಿ ಈ ರಾಸಾಯನಿಕಗಳ ತೀವ್ರ ಕೊರತೆ ಉಂಟಾಗಿದೆ. ಪೂರೈಕೆ ವ್ಯತ್ಯಯವಾದರೆ ಮಾರುಕಟ್ಟೆಯಲ್ಲಿ ಔಷಧಗಳ ಅಭಾವ ಸೃಷ್ಟಿಯಾಗಬಹುದು ಎಂಬ ಕಾರಣಕ್ಕೆ ಬೆಲೆ ಏರಿಕೆಯ ನಿರ್ಧಾರಕ್ಕೆ ಬರಲಾಗಿದೆ.
ತಾಂತ್ರಿಕ ಗೊಂದಲ: ಈ ಬಿಕ್ಕಟ್ಟಿನ ಸಮಯದಲ್ಲಿ ಹೊಸ ದರದಲ್ಲಿ ಔಷಧಗಳನ್ನು ತಯಾರಿಸಿದರೆ, ಪರಿಸ್ಥಿತಿ ತಿಳಿಯಾದ ನಂತರ ಹಳೆಯ ದರಕ್ಕೆ ಮರಳುವುದು ಹೇಗೆ ಮತ್ತು ಉಳಿದ ಸ್ಟಾಕ್ ಅನ್ನು ಯಾವ ಬೆಲೆಗೆ ಮಾರಾಟ ಮಾಡಬೇಕು ಎಂಬ ತಾಂತ್ರಿಕ ವಿಚಾರದ ಬಗ್ಗೆ ಸರ್ಕಾರ ಗಂಭೀರವಾಗಿ ಚರ್ಚಿಸುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ.

