ಬೆಂಗಳೂರು: ಎಲ್.ಕೆ.ಜಿ.ಯಿಂದದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸಲಾಗುವುದು.
ಶಾಲಾ ಶಿಕ್ಷಣ ಇಲಾಖೆಯು ಎಲ್.ಕೆ.ಜಿ.ಯಿಂದ ದ್ವಿತೀಯ ಪಿಯುಸಿ ವರೆಗಿನ 46 ಲಕ್ಷ ಮಕ್ಕಳಿಗೆ 2026-27ನೇ ಶೈಕ್ಷಣಿಕ ಸಾಲಿನಿಂದ ಇದೆ ಮೊದಲ ಬಾರಿಗೆ ಉಚಿತವಾಗಿ ನೋಟ್ ಬುಕ್ ವಿತರಿಸಲು ಸಿದ್ಧತೆ ಮಾಡಿಕೊಂಡಿದೆ. ಸರ್ಕಾರಿ ಶಾಲೆಗಳಲ್ಲಿ 10ನೇ ತರಗತಿಯವರೆಗೆ 38 ಲಕ್ಷ ವಿದ್ಯಾರ್ಥಿಗಳು, ಪಿಯುಸಿಯಲ್ಲಿ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಿಗೆ ಈ ವರ್ಷದಿಂದ ಉಚಿತವಾಗಿ ನೋಟ್ ಬುಕ್ ಗಳನ್ನು ವಿತರಿಸಲಾಗುವುದು.
ಚಟುವಟಿಕೆ ಆಧಾರಿತ ಕಲಿಕೆಗೆ ಪೂರಕವಾದ ಪುಸ್ತಕಗಳ ಮುದ್ರಣ ಕಾರ್ಯ ಆರಂಭವಾಗಿದೆ. ಒಂದನೇ ತರಗತಿಯಿಂದ ಪಿಯುಸಿ ವರೆಗೆ ನೋಟ್ ಬುಕ್ ಗಳನ್ನು ನೀಡಲು ಸುಮಾರು 80 ಕೋಟಿ ರೂ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ವೆಚ್ಚವನ್ನು ಭರಿಸಲು ಕ್ರಮ ಕೈಗೊಳ್ಳಲಾಗಿದೆ. ಇದು ಸಾಧ್ಯವಾಗದಿದ್ದಲ್ಲಿ ಬೇರೆ ರೂಪದಲ್ಲಿ ಅನುದಾನ ಒದಗಿಸಲಾಗುವುದು.
ಈ ವರ್ಷ ಆರರಿಂದ 8ನೇ ತರಗತಿ ಮಕ್ಕಳಿಗೆ ಕೌಶಲ್ಯ ಶಿಕ್ಷಣ ನೀಡಲಿದ್ದು, ಪಠ್ಯಪುಸ್ತಕ ಸಿದ್ಧಪಡಿಸಲಾಗುತ್ತಿದೆ. ಇವುಗಳನ್ನು ಕೂಡ ಉಚಿತವಾಗಿ ವಿತರಿಸಲಾಗುವುದು ಎನ್ನಲಾಗಿದೆ.

