ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಬಗ್ಗೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗಿದೆ.
ವೈಜ್ಞಾನಿಕವಾಗಿ ಒಳಮಿಸಲಾತಿ ಜಾರಿಗೊಳಿಸಲು ಸೂಕ್ತ ಶಿಫಾರಸು ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನೇತೃತ್ವ ಸಮಿತಿ ನೀಡುವ ಶಿಫಾರಸುಗಳ ಆಧಾರದ ಮೇಲೆ ಏಪ್ರಿಲ್ 24ರಂದು ನಡೆಯುವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿ ಕುರಿತು ವಿಷಯ ಚರ್ಚೆಗೆ ನಿರ್ಧರಿಸಲಾಗಿದೆ.
ಸಂಪುಟ ಸಭೆ ವಿಷಯ ಪಟ್ಟಿಯಲ್ಲಿದ್ದ ವಿಷಯಗಳ ಮೇಲಿನ ಚರ್ಚೆ ಪೂರ್ಣವಾದ ಬಳಿಕ ಸಚಿವ ಕೆ.ಹೆಚ್. ಮುನಿಯಪ್ಪ, ಒಳ ಮೀಸಲಾತಿ ಬಗ್ಗೆ ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಗ ಸಿಎಂ ಸಿದ್ಧರಾಮಯ್ಯ ಒಳ ಮೀಸಲಾತಿ ವಿಚಾರ ತುಂಬಾ ಸಂಕೀರ್ಣವಾಗಿದ್ದು ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಲು ಚರ್ಚಿಸಬೇಕು ಎಂದು ಹೇಳಿದ್ದಾರೆ.
ಒಳ ಮೀಸಲಾತಿ ಚರ್ಚೆಯ ವೇಳೆ ನ್ಯಾಯಾಲಯ ಮೀಸಲಾತಿಗೆ ಶೇಕಡ 50ರ ಮಿತಿ ವಿಧಿಸಿರುವುದರಿಂದ ಶೇಕಡ 15ರಷ್ಟು ಎಸ್ಸಿ ಮೀಸಲಾತಿ ಮಾತ್ರ ಅನುಷ್ಠಾನಗೊಳಿಸಬಹುದು ಎನ್ನುವ ಕಾರಣಕ್ಕೆ ವಿಳಂಬ ಮಾಡುವುದು ಬೇಡ. ಈ ಮೀಸಲಾತಿ ವರ್ಗೀಕರಣ ಬಗ್ಗೆ ವೈಜ್ಞಾನಿಕವಾಗಿ ಚರ್ಚಿಸಿ ಅನುಷ್ಠಾನಗೊಳಿಸಲು ತಾಂತ್ರಿಕ ಸಮಿತಿ ರಚನೆಗೆ ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

