ದಾಂಡೇಲಿ: ರೈಲ್ವೆ ಬ್ರಿಡ್ಜ್ ಕಾಮಗಾರಿ ವೇಳೆ ಏಕಾಏಕಿ ಮಣ್ಣು ಕುಸಿದು ಬಿದ್ದ ಪರಿಣಾಮ ರೈಲ್ವೆ ಇಲಾಖೆಯ ತಾಂತ್ರಿಕ ಉದ್ಯೋಗಿಯೊಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿ ನಡೆದಿದೆ.
ಅಳ್ನಾವರ-ಅಂಬೇವಾಡಿ ಸೆಕ್ಷನ್‌ನ ಎಲ್‌ಸಿ ನಂ.11 ರಲ್ಲಿ ದಾಂಡೇಲಿ ತಾಲೂಕಿನ ಕರ್ಕಾ – ಬರ್ಚಿ ರೈಲ್ವೆ ಮಾರ್ಗದಲ್ಲಿ ಅಂಡರ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ತೆಗೆದು ಹಾಕಿದ್ದ ಮಣ್ಣು ಇದ್ದಕ್ಕಿದಂತೆ ಕುಸಿದಿದೆ. ಅವಶೇಷಗಳ ಅಡಿ ಸಿಲುಕಿ ರೈಲ್ವೆ ಇಲಾಖೆಯ ತಾಂತ್ರಿಕ ಸಿಬ್ಬಂದಿ ಮೃತಪಟ್ಟಿದ್ದಾರೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಾಲವಾಡಗಿ ಗ್ರಾಮದ ನಿವಾಸಿ ಮಹೇಶ ಶೇಖಪ್ಪ ತಳವಾರ (33) ಅವರ ಮೇಲೆ ಮಣ್ಣು ಬಿದ್ದ ಪರಿಣಾಮವಾಗಿ ಮಣ್ಣಿನಲ್ಲಿ ಸಿಲುಕಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಸ್ಥಳದಲ್ಲಿದ್ದ ರೈಲ್ವೆ ಇಲಾಖೆಯ ಸೀನಿಯರ್ ಸೆಕ್ಷೆನ್ ಇಂಜಿನಿಯರ್ ಮಕ್ತುಂ ಹುಸೇನ್ ಮಹಮ್ಮದ್ ಹುಸೇನ್ ಮುಲ್ಲಾ (57) ಎಂಬವರಿಗೆ ಗಂಭೀರ ಗಾಯವಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಶಿವಾನಂದ ಅಂಬಿಗೇರ್ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಾಯಗೊಂಡ ಸಿಬ್ಬಂದಿಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಟ್ಟಡ ಕಾಮಗಾರಿ ವೇಳೆ ಸೆಂಟ್ರಿಂಗ್ ಕುಸಿತ: ಮೂವರು ಕಾರ್ಮಿಕರು ದಾರುಣ ಸಾವು
ಆನೇಕಲ್: ಕಾರ್ಖಾನೆಯ ಕಟ್ಟಡ ಕಾಮಗಾರಿ ವೇಳೆ ಸೆಂಟ್ರಿಂಗ್ ಕುಸಿದು ಬಿದ್ದು ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು-ತಮಿಳುನಾಡಿನ ಗಡಿಭಾಗವಾದ ಹೊಸೂರಿನ ಸಿಪ್ಕಾಟ್ ಬಳಿ ನಡೆದಿದೆ.
ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುಮರೇಶನ್(39), ಮೈಕೆಲ್(26) ಮತ್ತು ಶ್ರೀನಿವಾಸನ್(26) ಮೃತ ದುರ್ದೈವಿಗಳು.
ಬಾಲಾಜಿ ಗೇರ್ಸ್ ಹೆಸರಿನ ಖಾಸಗಿ ಕಾರ್ಖಾನೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಕಾರ್ಮಿಕರು ಮೋಲ್ಡ್ಗೆ ಕಾಂಕ್ರೀಟ್ ಹಾಕುತ್ತಿದ್ದ ವೇಳೆ ಸೆಂಡ್ರಿಂಗ್ಗೆ ಹಾಕಿದ್ದ ಮರದ ದಿಮ್ಮಿಗಳು ಏಕಾಏಕಿ ಕುಸಿದಿವೆ. ಪರಿಣಾಮ ಕಟ್ಟಡದ ಅವಶೇಷಗಳಡಿ ಸಿಲುಕಿ ಮೂವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ದಿನೇಶ್, ಎಸ್ಪಿ ಅನಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿ ವೇಳೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಅವಶೇಷಗಳ ಅಡಿ ಸಿಲುಕಿದ್ದ ಕಾರ್ಮಿಕರ ಮೃತದೇಹಗಳನ್ನು ಕ್ರೇನ್ ಬಳಸಿ ಹೊರಕ್ಕೆ ತೆಗೆಯಲಾಗಿದೆ.
ಕಟ್ಟಡದ ವಿನ್ಯಾಸ ರೂಪಿಸಿದ ಎಂಜಿನಿಯರ್ ಸೇರಿದಂತೆ ಕಾಮಗಾರಿಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೊಸೂರು ಉಪ ಪೊಲೀಸ್ ವರಿಷ್ಠಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಕುಮಾರ್, ನಿರ್ಮಾಣ ಕಾಮಗಾರಿಯಲ್ಲಿ ಒಟ್ಟು 17 ಮಂದಿ ತೊಡಗಿಸಿಕೊಂಡಿದ್ದರು. ಮುಖ್ಯ ಪ್ರವೇಶ ದ್ವಾರ ಕುಸಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಮೃತರು ಹೊಸೂರು, ತಿರುಪತ್ತೂರು ಮತ್ತು ತಿರುವಣ್ಣಾಮಲೈ ಮೂಲದವರು ಎಂದು ತಿಳಿದುಬಂದಿದೆ ಎಂದಿದ್ದಾರೆ.

