HomeKarnatakaBIG NEWS: ಇಂದಿನಿಂದ ಕಾಗದರಹಿತ ಆಸ್ತಿ ನೋಂದಣಿ ಆರಂಭ

BIG NEWS: ಇಂದಿನಿಂದ ಕಾಗದರಹಿತ ಆಸ್ತಿ ನೋಂದಣಿ ಆರಂಭ

ಬೆಂಗಳೂರು: ರಾಜ್ಯದ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಆಸ್ತಿಗಳ ದಸ್ತಾವೇಜು ನೋಂದಣಿಯನ್ನು ಕಾಗದರಹಿತವಾಗಿಸಲಿದ್ದು, ಈ ಉದ್ದೇಶದ ಮೊದಲ ಪ್ರಯತ್ನ ಇಂದು ಆರಂಭವಾಗಲಿದೆ.

ಚಾಮರಾಜನಗರ ಜಿಲ್ಲೆಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಗುರುವಾರ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೊಳ್ಳಲಿದೆ. ಇದರೊಂದಿಗೆ ಅಸ್ತಿಪತ್ರ ಭೌತಿಕ ದಾಖಲೆ ಬದಲಿಗೆ ಡಿಜಿಟಲ್ ನಲ್ಲಿ ಆಸ್ತಿಯ ದಾಖಲೆ ಪತ್ರಗಳು ಇರಲಿವೆ. ಅಗತ್ಯವಿದ್ದಾಗ ಸರ್ಟಿಫೈಡ್ ಕಾಪಿ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.

ಕಾಗದ ರಹಿತವಾಗಿ ಆಸ್ತಿ ನೋಂದಣಿ ಸೇವೆಗೆ ಕಾವೇರಿ 2.0 ತಂತ್ರಾಂಶದಲ್ಲಿ ಅಪ್ ಡೇಟ್ ಮಾಡಲಾಗಿದೆ. ನೋಂದಣಿ ಪ್ರಕ್ರಿಯೆ ಸಂಪೂರ್ಣ ಆನ್ಲೈನ್ ನಲ್ಲೇ ನಡೆಯಲಿದೆ. ನೋಂದಣಿ ಆದ ನಂತರ ದಾಖಲೆ ಪತ್ರಗಳನ್ನು ಕೈಗೆ ನೀಡುವುದಿಲ್ಲ. ಇದರ ಬದಲಿಗೆ ಲಾಗಿನ್ ಐಡಿ ಪಾಸ್ವರ್ಡ್ ಸಿಗಲಿದ್ದು ಯಾವುದೇ ವ್ಯವಹಾರವಿದ್ದರೂ ಇದರ ಮೂಲಕವೇ ನಡೆಸಬೇಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಗದ ರಹಿತ ಸೇವೆ ಪ್ರಾಯೋಗಿಕವಾಗಿ ಚಾಮರಾಜನಗರ ಜಿಲ್ಲೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಗುರುವಾರ ಜಾರಿಗೆ ಬರಲಿದ್ದು, ಇದರ ಸಾಧಕ ಬಾಧಕಗಳ ಅಧ್ಯಯನ ನಡೆಸಿದ ನಂತರ ರಾಜ್ಯಾದ್ಯಂತ ಹಂತ ಹಂತವಾಗಿ ವಿಸ್ತರಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕ್ರಮ ಕೈಗೊಂಡಿದೆ.

ನೋಂದಾಯಿತ ದಸ್ತಾವೇಜು ದಾಖಲೆಗಳು ಸ್ವಯಂ ಚಾಲಿತವಾಗಿ ಕಂದಾಯ ಇಲಾಖೆಯ ಕರ್ನಾಟಕ ನೋಂದಾಯಿತ ದಾಖಲೆ ಸಂಗ್ರಹಾಲಯ ಮತ್ತು ಡಿಜಿ ಲಾಕರ್ ನಲ್ಲಿ ಸೇವ್ ಆಗಲಿದ್ದು, ಈ ದಾಖಲೆ ಡೌನ್ಲೋಡ್ ಮಾಡಿಕೊಳ್ಳಲು ಅಥವಾ ಮುದ್ರಿಸಲು ವಿಶಿಷ್ಟ ದಾಖಲೆ ಸಂಖ್ಯೆ ನೀಡಲಾಗುತ್ತದೆ. ಡಿಜಿಟಲ್ ದಾಖಲೆಯು ಅಧಿಕೃತ ಮತ್ತು ಕಾನೂನುಬದ್ಧ ಮಾನ್ಯವಾದ ನೋಂದಾಯಿತ ದಾಖಲೆಯಾಗಿರುತ್ತದೆ. ಕಂದಾಯ ಇಲಾಖೆ ಡೇಟಾಬೇಸ್ ನಲ್ಲಿ ಇರುವುದು ಅಸಲಿ ದಾಖಲೆ ಎಂದು ಪರಿಗಣಿಸಲಾಗಿದ್ದು, ವಾರಸುದಾರರ ಬಳಿ ಸರ್ಟಿಫೈಡ್ ದಾಖಲೆ ಇರಲಿದೆ.

ನಿವೇಶನ, ಮನೆ, ಜಮೀನು, ಇನ್ನಿತರ ಆಸ್ತಿಗಳ ಕ್ರಯ, ವಿಲ್, ದಾನ ಪತ್ರ, ಕರಾರು ಸೇರಿದಂತೆ ವಿವಿಧ ದಸ್ತಾವೇಜುಗಳನ್ನು ನೋಂದಣಿಗೆ ಕಾಗದದ ಮೇಲೆ ಪಕ್ಷಕಾರರ ನಡುವಿನ ವ್ಯವಹಾರ ಮುದ್ರಿಸಲಾಗುತ್ತದೆ. ನಂತರ ಕಾವೇರಿ 2.0 ಸಿಟಿಜನ್ ಲಾಗಿನ್ ನಲ್ಲಿ ದಸ್ತಾವೇಜು ಅಪ್ಲೋಡ್ ಮಾಡಿ ಆಸ್ತಿ ವಿವರವನ್ನು ಸರ್ಕಾರದ ದತ್ತಾಂಶದಿಂದ ಸ್ವೀಕರಿಸಿ ಅಪ್ಲೋಡ್ ಮಾಡಲಾಗುವುದು. ಸಬ್ ರಿಜಿಸ್ಟ್ರಾರ್ ಪರಿಶೀಲಿಸಿ ಸರಿ ಇದ್ದರೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಲು ವಾಪಸ್ ಸಿಟಿಜನ್ ಲಾಗಿನ್ ಗೆ ಕಳುಹಿಸುವರು. ದೋಷವಿದ್ದರೆ ಹಿಂತಿರುಗಿಸುತ್ತಾರೆ. ಇದಾದ ನಂತರ ಪಕ್ಷಕಾರರು ಆನ್ಲೈನ್ ಪೇಮೆಂಟ್ ಗೇಟ್ ವೇ ನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಬೇಕು. ಎರಡೂ ಕಡೆಯ ಪಕ್ಷಗಾರರು ಆಧಾರ್ ಆಧಾರಿತ ಡಿಜಿಟಲ್ ಸಿಗ್ನೇಚರ್ ಪ್ರಮಾಣ ಪತ್ರ ಮೂಲಕ ರುಜು ಮಾಡಬೇಕು. ಡಿಜಿಟಲ್ ಸಹಿ ಮಾಡಿ ನೋಂದಣಿಗೆ ಸಬ್ ರಿಜಿಸ್ಟ್ರಾರ್ ಲಾಗಿನ್ ಗೆ ಕಳುಹಿಸಬೇಕು. ಭೌತಿಕ ದಾಖಲೆ ಪತ್ರಗಳನ್ನು ಅಧಿಕಾರಿಯ ಮುಂದೆ ಕೊಡುವ ಅಗತ್ಯವಿರುವುದಿಲ್ಲ.

ಲಾಗಿನ್ ನಲ್ಲಿ ಬಂದ ಕಾಗದ ರಹಿತ ದಾಖಲೆಗಳನ್ನು ನೋಂದಣಿ ಕಾಯ್ದೆ ಮತ್ತು ನಿಯಮಗಳ ಅನ್ವಯ ಪರಿಶೀಲಿಸಿ ಸಬ್ ರಿಜಿಸ್ಟ್ರಾರ್ ಪಕ್ಷಕಾರರು ಸಾಕ್ಷಿಗಳ ಫೋಟೋ, ಬೆರಳಚ್ಚು ಗುರುತನ್ನು ಡಿಜಿಟಲ್ ಯಂತ್ರದ ಮೂಲಕ ಸೆರಹಿಡಿದು ಅಂತಿಮವಾಗಿ ಡಿಜಿಟಲ್ ಸಹಿ ಮಾಡಿ ದಸ್ತಾವೇಜು ನೋಂದಣಿ ಪ್ರಕ್ರಿಯೆಯನ್ನು ಸಬ್ ರಿಜಿಸ್ಟ್ರಾರ್ ಪೂರ್ಣಗೊಳಿಸಲಿದ್ದಾರೆ. ಶುಲ್ಕ ಪಾವತಿ ರಸೀದಿ ದಾಖಲೆ ಸಂಗ್ರಹಿಸಿ ಸಂಬಂಧಿಸಿದ ವ್ಯಕ್ತಿಗೆ ಲಾಗಿನ್ ನಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular