ಬೀದರ್: ಬೀದರ್ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಬಸವಕಲ್ಯಾಣ ತಾಲೂಕು ಆರೋಗ್ಯಾಧಿಕಾರಿ ಇಬ್ಬರನ್ನೂ ಅಮಾನತುಗೊಳಿಸಿ ಆದೇಶ ಹೊರಡಿಸಿರುವ ಘಟನೆ ಬೆಳಕಿಗೆ ಬಂದಿದೆ.
ಶಿಷ್ಟಾಚಾರ ಉಲ್ಲಂಘನೆ ಮತ್ತು ಕರ್ತವ್ಯ ಲೋಪದ ಆರೋಪ ಹಿನ್ನೆಲೆಯಲ್ಲಿ ಬೀದರ್ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧ್ಯಾನೇಶ್ವರ ನಿರಗುಡಿ ಮತ್ತು ಬಸವಕಲ್ಯಾಣ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಮೈಲಾರಿ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ.
ಶಿಷ್ಟಾಚಾರ ಉಲ್ಲಂಘನೆ ಮತ್ತು ಕರ್ತವ್ಯ ಲೋಪದ ಆರೋಪ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತ ಗುರುದತ್ತ ಹೆಗಡೆ ಅವರು ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಉಪವಿಭಾಗ ಆಸ್ಪತ್ರೆ ಕಟ್ಟಡ ಕಾಮಗಾರಿಯ ಸಂದರ್ಭದಲ್ಲಿ ಶಿಷ್ಠಾಚಾರ ಉಲ್ಲಂಘನೆ ಮಾಡಿರುವುದಕ್ಕೆ ಅಮಾನತು ಮಾಡಲಾಗಿದೆ. ಕಾಮಗಾರಿ ಸ್ಥಳದಲ್ಲಿ ಹಾಕಲಾಗಿದ್ದ ಬ್ಯಾನರ್ನಲ್ಲಿ ರಾಜ್ಯದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಭಾವಚಿತ್ರವನ್ನು ಹಾಕದೇ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದರ ಜೊತೆಗೆ, ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿಯೂ ಈ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಕಲ್ಲು ಕ್ವಾರಿ ಪರವಾನಗಿ ನಿಯಮ ಉಲ್ಲಂಘನೆ: ಸಚಿವ ರುದ್ರಪ್ಪ ಲಮಾಣಿಗೆ 3 ಕೋಟಿ ದಂಡ ವಿಧಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ಹಾವೇರಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಲ್ಲು ಕ್ವಾರಿ ಮಾಲೀಕರಾದ ರುದ್ರಪ್ಪ ಲಮಾಣಿ ಅವರಿಗೆ ಬರೋಬ್ಬರಿ 3 ಕೋಟಿ ರೂ. ದಂಡ ವಿಧಿಸಿರುವ ಘಟನೆ ನಡೆದಿದೆ.
ಕಲ್ಲು ಕ್ವಾರಿ ಪರವಾನಗಿ ನಿಯಮಗಳನ್ನ ಉಲ್ಲಂಘಿಸಿದ ಆರೋಪದ ಹಿನ್ನೆಲೆ ಸಚಿವರುದ್ರಪ್ಪ ಲಮಾಣಿ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ 3 ಕೋಟಿ ರೂ. ದಂಡ ವಿಧಿಸಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹುಣಸಿಕಟ್ಟಿ ಬಳಿ ಇರುವ ಕಲ್ಲು ಕ್ವಾರಿಗೆ ಸಂಬಂಧಿಸಿದಂತೆ ದಂಡ ವಿಧಿಸಲಾಗಿದೆ.
ನಿಗದಿಪಡಿಸಿದ ವ್ಯಾಪ್ತಿ ಮೀರಿ ಹೆಚ್ಚುವರಿಯಾಗಿ ಕಲ್ಲು ತೆಗೆದಿರುವುದು ಹಾಗೂ ಕ್ವಾರಿ ಸುತ್ತಮುತ್ತಲಿನ ಜಾಗವನ್ನ ಒತ್ತುವರಿ ಮಾಡಿಕೊಂಡು ಕಲ್ಲು ಗಣಿಗಾರಿಕೆ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಇಲಾಖೆ ನೋಟಿಸ್ನಲ್ಲಿ ಉಲ್ಲೇಖಿಸಿದೆ.
ಕಲ್ಲು ಕ್ವಾರಿ ಪ್ರದೇಶದಲ್ಲಿ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನ ಪರಿಶೀಲಿಸಲು ಡ್ರೋಣ್ ಮೂಲಕ ಸಮೀಕ್ಷೆ ನಡೆಸಲಾಗಿದೆ. ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ಸ್ ಸೆಂಟರ್ (KRSAC) ಮೂಲಕ ನಡೆಸಲಾದ ಸಮೀಕ್ಷೆಯ ಆಧಾರದ ಮೇಲೆ ನಿಯಮ ಉಲ್ಲಂಘನೆಗಳನ್ನು ಗುರುತಿಸಲಾಗಿದೆ. ಈ ಹಿನ್ನೆಲೆ ಕಲ್ಲು ಕ್ವಾರಿ ಹಾಗೂ ಕ್ರಷರ್ ಮಾಲೀಕರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಂಡ ವಿಧಿಸಿದೆ.
ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 3 ಕೋಟಿ ರೂ.ದಂಡದ ಮೊತ್ತ ಪಾವತಿಸುವಂತೆ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಪಾವತಿಗೆ 6 ತಿಂಗಳ ಕಾಲಾವಕಾಶ ನೀಡಲಾಗಿದೆ. ಒಟ್ಟು 3 ಕೋಟಿ ರೂ. ದಂಡವನ್ನ ಮೂರು ಕಂತುಗಳಲ್ಲಿ ಪಾವತಿಸುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಪರವಾನಗಿ ನಿಯಮಗಳ ಪ್ರಕಾರ ನಿಗದಿಪಡಿಸಿದ ವ್ಯಾಪ್ತಿಯಲ್ಲೇ ಕಲ್ಲು ತೆಗೆಯಬೇಕಾಗಿದ್ದರೂ, ಹೆಚ್ಚುವರಿ ಪ್ರದೇಶದಲ್ಲಿ ಕಲ್ಲು ತೆಗೆದಿರುವುದು ಮತ್ತು ಅಕ್ಕಪಕ್ಕದ ಜಾಗವನ್ನ ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಿರುವುದು ದಂಡ ವಿಧಿಸಲು ಕಾರಣವಾಗಿದೆ ಎಂದು ಇಲಾಖೆ ತಿಳಿಸಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾವೇರಿ ಜಿಲ್ಲಾ ಕ್ರಷರ್ಸ್ ಹಾಗೂ ಕ್ವಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ವರಾಜ ಬೆಳವಡಿ ಪ್ರತಿಕ್ರಿಯಿಸಿದ್ದು, ಸಚಿವ ರುದ್ರಪ್ಪ ಲಮಾಣಿ ಅವರಿಗೂ 3 ಕೋಟಿ ರೂ. ದಂಡ ಬಂದಿದೆ. ಅವರು ಮಂತ್ರಿಗಳಾಗಿದ್ದು, ಈ ವಿಚಾರವಾಗಿ ಮುಖ್ಯಮಂತ್ರಿಗಳ ಬಳಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ನಾವು ಹೋರಾಟ ನಡೆಸಿದ ಬಳಿಕವಷ್ಟೇ ಈ ವಿಚಾರಗಳು ಬಯಲಿಗೆ ಬರುತ್ತಿವೆ ಎಂದು ಹೇಳಿದ್ದಾರೆ.
ನಿಯಮ ಉಲ್ಲಂಘನೆಯಾಗಿರುವುದು ತಪ್ಪು ಎಂದು ಅವರೂ ಒಪ್ಪಿಕೊಂಡಿದ್ದಾರೆ. ಆದರೆ ಸರ್ಕಾರ ಅವರದ್ದೇ ಆಗಿರುವುದರಿಂದ ರುದ್ರಪ್ಪ ಲಮಾಣಿ ಅವರು ಈ ವಿಚಾರದಲ್ಲಿ ಅಸಹಾಯಕರಾಗಿದ್ದಾರೆ ಎಂದು ವರಾಜ ಬೆಳವಡಿ ಆರೋಪಿಸಿದ್ದಾರೆ.
ಸಚಿವ ರುದ್ರಪ್ಪ ಲಮಾಣಿ ಅವರಿಗೆ ಮಾತ್ರವಲ್ಲ, ಹಾವೇರಿ ಜಿಲ್ಲೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಕಲ್ಲು ಕ್ವಾರಿ ಮಾಲೀಕರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಯಮ ಉಲ್ಲಂಘನೆ ವಿಚಾರವಾಗಿ ದಂಡ ವಿಧಿಸಿದೆ.

