ನವದೆಹಲಿ: ದೇಶದ ಟ್ಯಾಕ್ಸಿ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ಸಜ್ಜಾಗಿರುವ, ಕೇಂದ್ರ ಸರ್ಕಾರದ ಬೆಂಬಲಿತ ‘ಭಾರತ್ ಟ್ಯಾಕ್ಸಿ’ (Bharat Taxi) ಆ್ಯಪ್ಗೆ ಇಂದು ಚಾಲನೆ ಸಿಗಲಿದೆ. ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಇಂದು ಮಧ್ಯಾಹ್ನ 3 ಗಂಟೆಗೆ ದೆಹಲಿಯಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ
ಏನಿದು ಭಾರತ್ ಟ್ಯಾಕ್ಸಿ?
ಇದು ಕೇವಲ ಮತ್ತೊಂದು ಟ್ಯಾಕ್ಸಿ ಆ್ಯಪ್ ಅಲ್ಲ ಇದು ಸಹಕಾರ ಮಾದರಿ (Cooperative Model) ಮೇಲೆ ನಡೆಯುವ ಸಂಸ್ಥೆ. ಸಹಕಾರ್ ಟ್ಯಾಕ್ಸಿ ಕೋ-ಆಪರೇಟಿವ್ ಲಿಮಿಟೆಡ್ ಇದನ್ನು ನಿರ್ವಹಿಸುತ್ತಿದ್ದು ವಿಶ್ವವಿಖ್ಯಾತ ಅಮುಲ್ ಮಾದರಿಯಲ್ಲಿ ಇದು ಕಾರ್ಯನಿರ್ವಹಿಸಲಿದೆ. ಇಲ್ಲಿ ಚಾಲಕರೇ ಮಾಲೀಕರು
ಇದು ಹೇಗೆ ಕೆಲಸ ಮಾಡುತ್ತದೆ?
ಭಾರತ್ ಟ್ಯಾಕ್ಸಿ ಉಳಿದ ಟ್ಯಾಕ್ಸಿ ಆ್ಯಪ್ಗಳಿಗಿಂತ ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಭಿನ್ನವಾಗಿದೆ:
ಸಾರಥಿಗಳಿಗೆ ಷೇರು: ಇಲ್ಲಿ ಪ್ರತಿಯೊಬ್ಬ ಚಾಲಕನನ್ನು ಸಾರಥಿ ಎಂದು ಕರೆಯಲಾಗುತ್ತದೆ. ಪ್ರತಿಯೊಬ್ಬ ಚಾಲಕನೂ ಈ ಸಹಕಾರ ಸಂಸ್ಥೆಯ 5 ಷೇರುಗಳನ್ನು ಹೊಂದಿರುತ್ತಾರೆ.
ಕಮಿಷನ್ ಕಿರಿಕಿರಿ ಇಲ್ಲ: ಖಾಸಗಿ ಆ್ಯಪ್ಗಳು ಪ್ರತಿ ಸವಾರಿಯ ಮೇಲೆ ಭಾರೀ ಮೊತ್ತದ ಕಮಿಷನ್ ಕಡಿತಗೊಳಿಸುತ್ತವೆ. ಆದರೆ ಭಾರತ್ ಟ್ಯಾಕ್ಸಿಯಲ್ಲಿ ಯಾವುದೇ ಕಮಿಷನ್ ಇರುವುದಿಲ್ಲ.
ದಿನಕ್ಕೆ ₹30 ಮಾತ್ರ: ಚಾಲಕರು ಈ ಆ್ಯಪ್ ಬಳಸಲು ದಿನಕ್ಕೆ ಕೇವಲ 30 ರೂಪಾಯಿ ಸ್ಥಿರ ಶುಲ್ಕ (Fixed Fee) ಪಾವತಿಸಿದರೆ ಸಾಕು. ಉಳಿದ ಪೂರ್ಣ ಹಣ ಚಾಲಕರಿಗೇ ಸೇರುತ್ತದೆ.ಪ್ರತಿಯೊಬ್ಬ ಚಾಲಕನೂ ಕಡ್ಡಾಯವಾಗಿ ಪೊಲೀಸ್ ವೆರಿಫಿಕೇಶನ್ಗೆ ಒಳಪಡುತ್ತಾರೆ.
ಆ್ಯಪ್ನಲ್ಲಿ ತುರ್ತು ಸಹಾಯವಾಣಿ ಸೌಲಭ್ಯವನ್ನೂ ನೀಡಲಾಗಿದೆ.
ಆ್ಯಪ್ನಲ್ಲಿ ಏನೇನಿದೆ? ಇತರ ಆ್ಯಪ್ಗಳಂತೆಯೇ ಇಲ್ಲಿಯೂ ಎಸಿ/ನಾರ್ಮಲ್ ಕ್ಯಾಬ್ಗಳು, ಎಕ್ಸ್ಎಲ್ ಕ್ಯಾಬ್ಗಳು, ಆಟೋ ಮತ್ತು ಬೈಕ್ ಟ್ಯಾಕ್ಸಿಗಳ ಆಯ್ಕೆ ಲಭ್ಯವಿದೆ. ಈಗಾಗಲೇ 4 ಲಕ್ಷಕ್ಕೂ ಹೆಚ್ಚು ಚಾಲಕರು ಈ ವೇದಿಕೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ.
ನನ್ನ ಚಾಲಕ ಸೋದರರೇ ಇಲ್ಲಿ ಮಾಲೀಕರು: ಅಮಿತ್ ಶಾ
ಈ ಕುರಿತು ‘X’ (ಟ್ವಿಟ್ಟರ್) ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಮಿತ್ ಶಾ, ಸಹಕಾರ ತತ್ವದ ಮೂಲಕ ಸಣ್ಣ ಮೊತ್ತದ ಬಂಡವಾಳ ಹೂಡಿ ಹೇಗೆ ದೊಡ್ಡ ಆರಂಭ ಮಾಡಬಹುದು ಎಂಬುದಕ್ಕೆ ಭಾರತ್ ಟ್ಯಾಕ್ಸಿ ಅತ್ಯುತ್ತಮ ಉದಾಹರಣೆ. ಈ ಸೇವೆಯ ಮೂಲಕ ಚಾಲಕರು ಕೇವಲ ಹೆಚ್ಚಿನ ಲಾಭ ಗಳಿಸುವುದು ಮಾತ್ರವಲ್ಲ, ಗೌರವಯುತವಾಗಿ ಸಂಸ್ಥೆಯ ಮಾಲೀಕರೂ ಆಗಲಿದ್ದಾರೆ ಎಂದು ಬಣ್ಣಿಸಿದ್ದಾರೆ.
ಏನಿದು ಭಾರತ್ ಟ್ಯಾಕ್ಸಿಯ ವಿಶೇಷತೆ?
ಇದು ಕೇವಲ ಒಂದು ಆ್ಯಪ್ ಅಲ್ಲ ಇದು ಚಾಲಕರಿಂದಲೇ ನಡೆಸಲ್ಪಡುವ ಸಹಕಾರ ಮಾದರಿಯ (Cooperative Model) ಸೇವೆಯಾಗಿದೆ. ಇದರ ಮುಖ್ಯ ಉದ್ದೇಶಗಳು ಇಲ್ಲಿವೆ:
ಚಾಲಕರೇ ಕೇಂದ್ರಬಿಂದು: ಸಹಕಾರ್ ಟ್ಯಾಕ್ಸಿ ಕೋ-ಆಪರೇಟಿವ್ ಲಿಮಿಟೆಡ್ ಅಡಿಯಲ್ಲಿ ನಡೆಯುವ ಈ ಸೇವೆಯಲ್ಲಿ ಚಾಲಕರಿಗೆ ಮಾಲೀಕತ್ವ ಮತ್ತು ಕಾರ್ಯನಿರ್ವಹಣೆಯಲ್ಲಿ ಸಮಾನ ಪಾಲು ಇರಲಿದೆ.
ಅಮುಲ್ ಮಾದರಿ: ವಿಶ್ವದ ಯಶಸ್ವಿ ಸಹಕಾರ ಸಂಸ್ಥೆ ‘ಅಮುಲ್’ನಲ್ಲಿ ಕೆಲಸ ಮಾಡಿದ ತಜ್ಞರ ಮಾರ್ಗದರ್ಶನದಲ್ಲಿ ಈ ಸಂಸ್ಥೆ ರೂಪುಗೊಂಡಿದೆ.
ಶೋಷಣೆಗೆ ಮುಕ್ತಿ: ಖಾಸಗಿ ಕಂಪನಿಗಳ ಶೋಷಣೆಯಿಂದ ಚಾಲಕರನ್ನು ರಕ್ಷಿಸುವುದು ಈ ಯೋಜನೆಯ ಮೂಲ ಗುರಿ.
ಎಲ್ಲೆಲ್ಲಿ ಲಭ್ಯ?
ಇಂದು ದೆಹಲಿ-ಎನ್ಸಿಆರ್ ವಲಯದಲ್ಲಿ ಅಧಿಕೃತವಾಗಿ ಲಭ್ಯವಾಗಲಿದ್ದು ಶೀಘ್ರದಲ್ಲೇ ದೇಶದಾದ್ಯಂತ ವಿಸ್ತರಣೆಯಾಗಲಿದೆ. ಡಿಸೆಂಬರ್ 2025 ರ ಪ್ರಾಯೋಗಿಕ ಹಂತದಲ್ಲಿ ಗುಜರಾತ್ ಮತ್ತು ದೆಹಲಿಯಲ್ಲಿ ಪ್ರತಿದಿನ ಸರಾಸರಿ 5,500 ರೈಡ್ಗಳನ್ನು ಪೂರೈಸುವ ಮೂಲಕ ಇದು ಈಗಾಗಲೇ ಯಶಸ್ವಿಯಾಗಿದೆ

