ಬಾಲಿವುಡ್‌ನಲ್ಲಿ ಸೂಪರ್‌ಸ್ಟಾರ್‌ಗಳ ಬಗ್ಗೆ ಮಾತನಾಡುವಾಗ ದಿಲೀಪ್ ಕುಮಾರ್, ರಾಜೇಶ್ ಖನ್ನಾ ಅಥವಾ ಅಮಿತಾಭ್ ಬಚ್ಚನ್ ಅವರ ಹೆಸರುಗಳು ನೆನಪಾಗುತ್ತವೆ. ಆದರೆ ಒಂದು ಕಾಲದಲ್ಲಿ ಇವರೆಲ್ಲರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದ, ಭಾರತದ ಅತ್ಯಂತ ಶ್ರೀಮಂತ ನಟ ಎನಿಸಿಕೊಂಡಿದ್ದ ವ್ಯಕ್ತಿ ಭಾರತ ಭೂಷಣ್. 1952ರಲ್ಲಿ ಸ್ಟಾರ್ ಆಗಿ ಮಿಂಚಿದ ಇವರು ದಶಕಗಳ ಕಾಲ ಹಿಂದಿ ಚಿತ್ರರಂಗವನ್ನು ಆಳಿದ್ದರು. ದುರಂತವೆಂದರೆ, ಉತ್ತುಂಗದಲ್ಲಿದ್ದಾಗ ಕೋಟ್ಯಂತರ ಹಣ ಹೊಂದಿದ್ದ ಈ ನಟ, ಕೊನೆಯ ದಿನಗಳಲ್ಲಿ ಅತ್ಯಂತ ಬಡತನದಲ್ಲಿ ಜೀವನ ನಡೆಸಬೇಕಾಯಿತು.
ಭಾರತ ಭೂಷಣ್ ಅವರ ಯಶಸ್ಸು ಎಷ್ಟಿತ್ತೆಂದರೆ, ಅಂದಿನ ದಿಗ್ಗಜ ನಟರಾದ ರಾಜ್ ಕಪೂರ್ ಮತ್ತು ದೇವ್ ಆನಂದ್ ಅವರಿಗೆ ಇವರು ಕಠಿಣ ಪೈಪೋಟಿ ನೀಡುತ್ತಿದ್ದರು. ಆದರೆ ಇವರ ಪತನಕ್ಕೆ ಕಾರಣವಾಗಿದ್ದು ಸ್ವಂತ ಅಣ್ಣನ ಹಠ ಎನ್ನಲಾಗುತ್ತದೆ. ಅಣ್ಣ ರಮೇಶ್‌ಚಂದ್ರ ಗುಪ್ತ ಅವರ ಮಾತನ್ನು ಕೇಳಿ ಭಾರತ ಭೂಷಣ್ ಅವರು ಸಿನಿಮಾಗಳ ನಿರ್ಮಾಣಕ್ಕೆ ಇಳಿದರು. ಸಾಲು ಸಾಲು ಸಿನಿಮಾಗಳ ಮೇಲೆ ಹಣ ಹೂಡಿಕೆ ಮಾಡಿದರು. ದುರದೃಷ್ಟವಶಾತ್ ಇವರು ನಿರ್ಮಿಸಿದ ಬಹುತೇಕ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದವು.
ಸಿನಿಮಾಗಳ ನಷ್ಟದಿಂದಾಗಿ ಭಾರತ ಭೂಷಣ್ ಸಂಪೂರ್ಣವಾಗಿ ದಿವಾಳಿಯಾದರು. ಸಾಲ ತೀರಿಸಲು ತಮ್ಮ ಐಷಾರಾಮಿ ಬಂಗಲೆಯನ್ನು ಮಾರಾಟ ಮಾಡಬೇಕಾಯಿತು. ವಿಶೇಷವೆಂದರೆ, ಆ ಬಂಗಲೆಯನ್ನು ಅಂದು ಸೂಪರ್‌ಸ್ಟಾರ್ ಆಗಿದ್ದ ರಾಜೇಶ್ ಖನ್ನಾ ಖರೀದಿಸಿದ್ದರು. 80ರ ದಶಕದ ವೇಳೆಗೆ ಅವರ ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತೆಂದರೆ, ಒಮ್ಮೆ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಈ ಮಹಾನ್ ನಟನನ್ನು ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಕಾಯುತ್ತಾ ನಿಂತಿದ್ದನ್ನು ಕಂಡು ಮರುಗಿದ್ದರು. ಸಿನಿಮಾ ರಂಗದ ಯಶಸ್ಸು ಎಷ್ಟು ಕ್ಷಣಿಕ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿತ್ತು.
ತಮ್ಮ 72ನೇ ವಯಸ್ಸಿನಲ್ಲಿ (1992) ಭಾರತ ಭೂಷಣ್ ನಿಧನರಾದರು. ಅವರು ಶ್ರೀಮಂತರಾಗಿದ್ದಾಗ ಅವರ ಸುತ್ತಮುತ್ತ ಇದ್ದ ಚಿತ್ರರಂಗದ ಮಂದಿ, ಅವರು ಸಂಕಷ್ಟದಲ್ಲಿದ್ದಾಗ ಯಾರೂ ಇಣುಕಿಯೂ ನೋಡಲಿಲ್ಲ. ಕೇವಲ ಕುಟುಂಬದವರ ಆಸರೆಯಲ್ಲಿ ಅವರು ಕೊನೆಯುಸಿರೆಳೆದರು. ಬೆಳ್ಳಿತೆರೆಯ ಮಿಂಚಿನ ಬದುಕು ತೆರೆಯ ಹಿಂದೆ ಹೇಗೆಲ್ಲಾ ಕತ್ತಲಾಗಿರುತ್ತದೆ ಎಂಬುದಕ್ಕೆ ಭಾರತ ಭೂಷಣ್ ಅವರ ಜೀವನವೇ ಒಂದು ದೊಡ್ಡ ಪಾಠ.

