ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದದಿಂದಾಗಿ (Trade Deal) ಪ್ರಮುಖ ವಸ್ತುಗಳು ಮತ್ತು ಸೇವೆಗಳ ಮೇಲಿನ ಸುಂಕಗಳು ಕಡಿಮೆಯಾಗಲಿವೆ. ಇದರಿಂದ ಭಾರತದಿಂದ ರಫ್ತು ಹೆಚ್ಚಾಗಲಿದ್ದು, ಆರ್ಥಿಕತೆ ಸುಧಾರಿಸಲಿದೆ ಎಂದು ತಜ್ಞರು ಭಾವಿಸಿದ್ದಾರೆ. ಆದರೆ, ಈ ವ್ಯಾಪಾರ ಒಪ್ಪಂದದಿಂದ ರೈತರಿಗೆ ನಷ್ಟವಾಗುವ ಸಾಧ್ಯತೆಯಿದೆ ಎಂದು ರೈತ ಸಂಘಟನೆಗಳು ಹೇಳುತ್ತಿವೆ. ಭಾರತದ ಕೃಷಿ ಕ್ಷೇತ್ರವನ್ನು ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳಿಗೆ ಸಂಪೂರ್ಣವಾಗಿ ಒಪ್ಪಿಸುವುದೇ ಈ ಅಮೆರಿಕ-ಭಾರತ ಟ್ರೇಡ್ ಡೀಲ್ ಎಂದು ಅವು ಆಪಾದಿಸುತ್ತಿವೆ. ಈ ಒಪ್ಪಂದದಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ವಿರೋಧಿಸಿ ದೇಶಾದ್ಯಂತ ರೈತ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ ಮತ್ತು ದೇಶವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.
ಫೆಬ್ರವರಿ 12 ರಂದು ಬಂದ್
ಫೆಬ್ರವರಿ 12 ರಂದು ದೇಶಾದ್ಯಂತ ಬಂದ್ ನಡೆಸುವುದಾಗಿ ಆಲ್ ಇಂಡಿಯಾ ಕಿಸಾನ್ ಸಭಾ (AIKS) ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (SKM) ಕರೆ ನೀಡಿವೆ. ಈ ಕುರಿತು ಮಾತನಾಡಿದ ಕಿಸಾನ್ ಸಭಾ ನಾಯಕ ಕೃಷ್ಣ ಪ್ರಸಾದ್, “ಅಮೆರಿಕ-ಭಾರತ ವ್ಯಾಪಾರ ಒಪ್ಪಂದದಿಂದ ರೈತರ ಜೊತೆಗೆ ಹೈನುಗಾರಿಕೆ ಮಾಡುವ ರೈತರಿಗೂ ತೀವ್ರ ನಷ್ಟವಾಗಲಿದೆ. ಒಣಗಿದ ಡಿಸ್ಟಿಲರ್ ಧಾನ್ಯಗಳು (DDGS), ಪಶುಗ್ರಾಹಕ್ಕಾಗಿ ಕೆಂಪು ಜೋಳ ಮತ್ತು ಸೋಯಾಬೀನ್ ಎಣ್ಣೆಯಂತಹ ವಸ್ತುಗಳಿಗೆ ಭಾರತದ ಮಾರುಕಟ್ಟೆಯನ್ನು ಮುಕ್ತಗೊಳಿಸುವುದರಿಂದ ಕೃಷಿ ಮತ್ತು ಡೈರಿ ಉದ್ಯಮದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಜೊತೆಗಿನ ಭಾರತದ ಒಪ್ಪಂದಗಳು ದೇಶಕ್ಕೆ ಪ್ರಯೋಜನಕಾರಿಯಾಗಿಲ್ಲ, ಅವು ಕೇವಲ ಅವರ ಸ್ವಂತ ಆರ್ಥಿಕ ಹಿತಾಸಕ್ತಿಗಳಿಗಾಗಿ ನಡೆದಿವೆ ಎಂದು ವಿಮರ್ಶಿಸಿದ್ದಾರೆ.
ಟ್ರಂಪ್ ಮತ್ತು ಮೋದಿ ಪ್ರತಿಕೃತಿ ದಹನ
ಈ ತಿಂಗಳ 12 ರಂದು ನಡೆಯಲಿರುವ ಭಾರತ್ ಬಂದ್ ದೇಶಾದ್ಯಂತ ಯಶಸ್ವಿಯಾಗಲಿದೆ ಎಂದು ರೈತ ನಾಯಕರು ತಿಳಿಸಿದ್ದಾರೆ. ರೈತರೆಲ್ಲರೂ ಈ ಬಂದ್‌ನಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದ್ದಾರೆ. ಇದರ ಭಾಗವಾಗಿ ದೇಶದ ಎಲ್ಲಾ ಭಾಗಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ ಅವರ ಪ್ರತಿಕೃತಿ ದಹನ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಫೆಬ್ರವರಿ 2 ರಂದು ಭಾರತ ಮತ್ತು ಅಮೆರಿಕ ನಡುವೆ ಈ ವ್ಯಾಪಾರ ಒಪ್ಪಂದ ನಡೆದಿದ್ದು, ಅದೇ ದಿನ ಟ್ರಂಪ್ ಮತ್ತು ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಘೋಷಿಸಿದ್ದರು. ಮೋದಿ ಅವರೊಂದಿಗೆ ಮಾತನಾಡಿದ್ದು ಹೆಮ್ಮೆಯ ವಿಷಯ, ಅವರು ತಮ್ಮ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು ಎಂದು ಟ್ರಂಪ್ ಹೇಳಿದ್ದರು. ಅಲ್ಲದೆ, ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿ, ಅಮೆರಿಕ ಅಥವಾ ವೆನೆಜುವೆಲಾದಿಂದ ಹೆಚ್ಚಿನ ತೈಲ ಖರೀದಿಸಲು ಮೋದಿ ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಬಹಿರಂಗಪಡಿಸಿದ್ದರು.
ಫೆಬ್ರವರಿ 2, 2026 ರಂದು ಭಾರತ ಮತ್ತು ಅಮೆರಿಕ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.ಅಮೆರಿಕವು ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50 ರಿಂದ ಶೇ. 18ಕ್ಕೆ ಇಳಿಸಿದೆ.ಸೋಯಾಬೀನ್ ಎಣ್ಣೆ, ಕೆಂಪು ಜೋಳ ಮತ್ತು ಪ್ರಾಣಿಗಳ ಆಹಾರವಾಗಿ ಬಳಸುವ DDGS ಆಮದಿನಿಂದ ಸ್ಥಳೀಯ ಬೆಲೆಗಳು ಕುಸಿಯಬಹುದು ಎಂಬುದು ರೈತರ ಭಯ.ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಹಾಲು, ಬೆಣ್ಣೆ, ತುಪ್ಪದಂತಹ ಡೈರಿ ಉತ್ಪನ್ನಗಳು ಮತ್ತು ಗೋಧಿ, ಅಕ್ಕಿಯಂತಹ ಪ್ರಮುಖ ಬೆಳೆಗಳಿಗೆ ಒಪ್ಪಂದದಲ್ಲಿ ರಕ್ಷಣೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಬಂದ್ ಪರಿಣಾಮ ಹೇಗಿರಬಹುದು?
ಫೆಬ್ರವರಿ 12ರಂದು ನೀವು ಈ ಕೆಳಗಿನ ಬದಲಾವಣೆಗಳನ್ನು ಗಮನಿಸಬೇಕಾಗಬಹುದು:
- ಬ್ಯಾಂಕಿಂಗ್: ಬ್ಯಾಂಕ್ ಉದ್ಯೋಗಿಗಳ ಸಂಘಟನೆಗಳು ಬೆಂಬಲ ನೀಡಿರುವುದರಿಂದ ಹಣಕಾಸು ವಹಿವಾಟಿನಲ್ಲಿ ವಿಳಂಬವಾಗಬಹುದು.
- ಸಾರಿಗೆ: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಕಾರ್ಮಿಕ ಸಂಘಟನೆಗಳು ಈ ಬಗ್ಗೆ ಇನ್ನೂ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲವಾದರೂ, ಹಲವು ಕಡೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
- ಅಗತ್ಯ ಸೇವೆಗಳು: ಹಾಲು, ತರಕಾರಿ ಮತ್ತು ಆಸ್ಪತ್ರೆಗಳಂತಹ ಅಗತ್ಯ ಸೇವೆಗಳಿಗೆ ಸಾಮಾನ್ಯವಾಗಿ ಬಂದ್‌ನಿಂದ ವಿನಾಯಿತಿ ಇರುತ್ತದೆ.

