ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ವಿಜಯೋತ್ಸವದ ಮೆರವಣಿಗೆಯಲ್ಲಿ ಸಂಭವಿಸಿದ ಕಾಲ್ತುಳಿತಲ್ಲಿ ಮೃತರ ಕುಟುಂಬಗಳಿಗೆ ಪರಿಹಾರದ ಮೊತ್ತ ಹೆಚ್ಚಿಸಲಾಗಿದೆ.
ಮೊದಲಿಗೆ ಮೃತರ ಕುಟುಂಬದವರಿಗೆ ತಲಾ 10 ಲಕ್ಷ ರೂ. ಪರಿಹಾರದ ಭರವಸೆ ನೀಡಲಾಗಿತ್ತು, ಆದರೆ ಸಾರ್ವಜನಿಕರ ಆಕ್ರೋಶದ ನಂತರ, ಪರಿಹಾರವನ್ನು ಈಗ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತರಾದವರ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರವನ್ನು ತಲಾ 10 ಲಕ್ಷ ರೂ.ನಿಂದ 25 ಲಕ್ಷ ರೂ.ಗಳಿಗೆ ಹೆಚ್ಚಿಸುವಂತೆ ಆದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.
ತಮ್ಮವರನ್ನು ಕಳೆದುಕೊಂಡು ನೊಂದಿರುವ ಕುಟುಂಬಗಳು ಆರ್ಥಿಕ ಸಮಸ್ಯೆಗಳಿಂದಾಗಿ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗದಿರಲಿ ಎನ್ನುವುದು ನಮ್ಮ ಸರ್ಕಾರದ ಆಶಯವಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

