ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಬೆಂಗಳೂರು ನಗರದಲ್ಲಿ ಜಿಬಿಎ ವ್ಯಾಪ್ತಿಯ 4 ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರಿ ದರದಲ್ಲಿ ಚಿಕಿತ್ಸೆ ನೀಡುವ ಕುರಿತು ಕರ್ನಾಟಕ ಸರ್ಕಾರ ಆದೇಶವನ್ನು ಹೊರಡಿಸಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಪ್ರಭಾಕರ.ಟಿ, ಸರ್ಕಾರದ ಅಧೀನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯ (1&2) ಆದೇಶವನ್ನು ಹೊರಡಿಸಿದ್ದಾರೆ.
ಈ ಆದೇಶವು ಜಿಬಿಎ ಪ್ರದೇಶದೊಳಗಿನ 4 ಪ್ರತಿಷ್ಠಿತ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ Ab-Ark ಯೋಜನೆಯಡಿ ಸರ್ಕಾರಿ ದರೆಗಳಲ್ಲಿ ಒಂದು ವರ್ಷದವರೆಗೆ ಪ್ರಾಯೋಗಿಕ ಆಧಾರದ ಮೇಲೆ 2ಎ ಚಿಕಿತ್ಸಾ ವಿಧಾನಗಳಿಗೆ ಮಂಜೂರಾತಿ ಹಾಗೂ ಇತರೆ ಚಿಕಿತ್ಸಾ ವಿಧಾನಗಳಿಗೆ ರೆಫೆರಲ್ ವಿನಾಯಿತಿ ನೀಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಪ್ರಸ್ತಾವನೆ: AB-Ark ಯೋಜನೆಯು 2018 ರಿಂದ ರಾಜ್ಯದಲ್ಲಿ ಜಾರಿಯಲ್ಲಿದ್ದು, ಈ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ನೆಟ್‌ವರ್ಕ್ ಆಸ್ಪತ್ರೆಗಳನ್ನು ನಿರ್ದೇಶಿಸಲು ರೆಫರಲ್ ವ್ಯವಸ್ಥೆಯನ್ನು ಪರಿಚಯಿಸಲಾಗಿರುತ್ತದೆ.
ಸದರಿ ಆದೇಶದನ್ವಯ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಅಗತ್ಯವಿರುವ ನಿರ್ದಿಷ್ಟಪಡಿಸಿದ ದ್ವಿತೀಯ ಆರೋಗ್ಯ ಚಿಕಿತ್ಸೆ ಅಥವಾ ತೃತೀಯ ಆರೋಗ್ಯ ಚಿಕಿತ್ಸೆಯನ್ನು ಪಡೆಯಲು ಸಾರ್ವಜನಿಕ ಆರೋಗ್ಯ ಸಂಸ್ಥೆಯ (PHI) ರೆಫರಲ್ ಕಡ್ಡಾಯವಾಗಿರುತ್ತದೆ.
ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನದ ಪತ್ರದಲ್ಲಿ ಪ್ರಸ್ತುತವಾಗಿ ತುರ್ತು ಪ್ರಕರಣಗಳನ್ನು ಹೊರತುಪಡಿಸಿ, ಇತರೆ ಎಲ್ಲಾ ಪ್ರಕರಣಗಳನ್ನು ಸರ್ಕಾರಿ ಆಸ್ಪತ್ರೆಯಿಂದ ರೆಫೆರಲ್ ಅನ್ನು ಪಡೆದ ನಂತರವೇ SASTನೊಂದಿಗೆ ನೋಂದಾವಣೆ ಮಾಡಲಾದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬಹುದೆಂದು ತಿಳಿಸಿ, ಖಾಸಗಿ ವೈದ್ಯಕೀಯ ಕಾಲೇಜುಗಳು NMC ಮಾನದಂಡಗನುಗುಣವಾಗಿ ಸ್ಥಾಪಿಸಲ್ಪಟ್ಟಿರುವುದರಿಂದ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ರೆಫರಲ್ ಅವಶ್ಯಕತೆಯಿಂದ ವಿನಾಯಿತಿ ನೀಡುವ ಬಗ್ಗೆ ಪ್ರಸ್ತಾಪಿಸಲಾಗಿರುತ್ತದೆ. ಈ ಬಗ್ಗೆ ಅಗತ್ಯ ಕ್ರಮ ವಹಿಸಲು ಕೋರಲಾಗಿರುತ್ತದೆ.
ಈ ಕುರಿತಂತೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜೊತೆ ಸಮಾಲೋಚಿಸಲಾಗಿದ್ದು, ಜಿಬಿಎ ಪ್ರದೇಶದಲ್ಲಿನ ಆರೋಗ್ಯ ಮೂಲಸೌಕರ್ಯಗಳ ಅಧ್ಯಯನಕ್ಕಾಗಿ ರಚಿಸಲಾದ ತಜ್ಞರ ಸಮಿತಿಯು ನೀಡಿರುವ ವರದಿಯಲ್ಲಿ ಜಿಬಿಎ ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ಪತ್ರೆ ಹಾಸಿಗೆಗಳ ಗಮನಾರ್ಹ ಕೊರತೆ ಇರುವುದು ಕಂಡು ಬರುತ್ತದೆ, ಬಿಪಿಎಲ್ ಫಲಾನುಭವಿಗಳಿಗೆ ಒಳರೋಗಿಗಳ ಆರೈಕೆಯ ಪ್ರವೇಶವನ್ನು ಸೀಮಿತಗೊಳಿಸುತ್ತಿರುವುದು ಕಂಡುಬರುತ್ತದೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (AB-Ark) ಯೋಜನೆಯಡಿಯಲ್ಲಿ, ದ್ವಿತೀಯ ಹಂತದ ಸರಳ ಚಿಕಿತ್ಸಾ ವಿಧಾನಗಳನ್ನು (2A) ಪ್ರಸ್ತುತ ಸರ್ಕಾರಿ ವಲಯದಲ್ಲಿ ಮಾತ್ರ ಅನುಮತಿಸಲಾಗಿದ್ದು, ಅಲ್ಲದೇ, 2B ಮತ್ತು 3B ವಿಧಾನಗಳನ್ನು ಸರ್ಕಾರಿ ಆಸ್ಪತ್ರೆಗಳಿಂದ referral ಪಡೆದ ನಂತರವೇ ಖಾಸಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ನಿರ್ಭಂದಿಸಿದ್ದು, ಈ ಷರತ್ತುಗಳಿಂದ ಜಿಬಿಎ ವ್ಯಾಪ್ತಿಯಲ್ಲಿನ ಬಿಪಿಎಲ್ ಕುಟುಂಬಗಳಿಗೆ ಸಕಾಲಿಕ ಮತ್ತು ಕೈಗೆಟುಕುವ ದ್ವಿತೀಯ ಆರೈಕೆಯನ್ನು ಪಡೆಯುವಲ್ಲಿ ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಿರುವುರಿಂದಾಗಿ ಆಯುಷ್ಮಾನ್ ಭಾರತ್ ‘ಆರೋಗ್ಯ ಕರ್ನಾಟಕ (AB-Ark) ಅಡಿಯಲ್ಲಿ ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯ ಪ್ರಮುಖ ಉದ್ದೇಶದ ಮೇಲೆ ತೀವ್ರ ಪರಿಣಾಮ ಬೀರುತ್ತಿರುವುದು ಕಂಡುಬರುತ್ತದೆ.
ಜಿಬಿಎ ಪ್ರದೇಶದಲ್ಲಿ ಸೀಮಿತವಾದ ಸರ್ಕಾರಿ ಆಸ್ಪತ್ರೆಗಳ ಸೌಲಭ್ಯಗಳ ಮೇಲಿನ ರೋಗಿಗಳ ಹೊರೆ ಕಡಿಮೆ ಮಾಡಲು ಮತ್ತು ಲಭ್ಯವಿರುವ ಖಾಸಗಿ ವೈದ್ಯಕೀಯ ಕಾಲೇಜು ಮೂಲಸೌಕರ್ಯಗಳ ಅತ್ಯುತ್ತಮ ಬಳಕೆಯನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ಬೃಹತ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಪ್ರದೇಶದೊಳಗಿನ 4 ಪ್ರತಿಷ್ಠಿತ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ Ab-Ark ಯೋಜನೆಯಡಿ ಸರ್ಕಾರಿ ದರಗಳಲ್ಲಿ ಒಂದು ವರ್ಷದವರೆಗೆ ಪ್ರಾಯೋಗಿಕವಾಗಿ ದ್ವಿತೀಯ ಹಂತದ ಸರಳ (2ಎ) ಚಿಕಿತ್ಸಾ ವಿಧಾನಗಳಿಗೆ ಮಂಜೂರಾತಿ ಹಾಗೂ ಇತರೆ ಚಿಕಿತ್ಸಾ ವಿಧಾನಗಳಿಗೆ ರೆಫೆರಲ್ ತೀರ್ಮಾನಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಯಾವ-ಯಾವ ಆಸ್ಪತ್ರೆ: ಬೃಹತ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಪ್ರದೇಶದೊಳಗಿನ ನಾಲ್ಕು ಪ್ರತಿಷ್ಠಿತ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಾದ
* St. John Medical College, Bengaluru
* M.S. Ramaiah Medical College, Bengaluru
* Kempegowda Institute of Medical Sciences (KIMS)
* Dr. Ambedkar Medical College Hospital, Bengaluru ಗಳಲ್ಲಿ ಚಿಕಿತ್ಸೆಗಾಗಿ Ab-Ark ಯೋಜನೆಯಡಿ ಸರ್ಕಾರಿ ದರಗಳಲ್ಲಿ ಒಂದು ವರ್ಷದವರೆಗೆ ಪ್ರಾಯೋಗಿಕ ಆಧಾರದ ಮೇಲೆ ದ್ವಿತೀಯ ಹಂತದ ಸರಳ (2ಎ) ಚಿಕಿತ್ಸಾ ವಿಧಾನಗಳಿಗೆ ಮಂಜೂರಾತಿ ಹಾಗೂ ಇತರೆ ಚಿಕಿತ್ಸಾ ವಿಧಾನಗಳಿಗೆ ರೆಫೆರಲ್ ವಿನಾಯಿತಿ ನೀಡಿ ಆದೇಶಿಸಿದೆ.
ಸದರಿ ಚಿಕಿತ್ಸೆಗಳಿಗೆ ತಗಲುವ ವೆಚ್ಚವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿಗೆ ಹಂಚಿಕೆಯಾದ ಆಯವ್ಯಯ ಅನುದಾನದಡಿ ಭರಿಸತಕ್ಕದ್ದು. ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ಹಾಗೂ ನೀಡಿರುವ ಸಹಮತಿ ಮೇರೆಗೆ ಹಾಗೂ ಸಚಿವ ಸಂಪುಟದ ನಿರ್ಣಯ ಅನುಸಾರ ಹೊರಡಿಸಲಾಗಿದೆ.

