ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ.
ಕೇಂದ್ರ ಚುನಾವಣಾ ಆಯೋಗ ಈ ಬಗ್ಗೆ ಮಾಹಿತಿ ಘೋಷಣೆ ಮಾಡಿದ್ದು, ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟು ಹೋಗಿರುವ ಮತ್ತು 18 ವರ್ಷ ತುಂಬಿದ ಯುವ ಮತದಾರರ ಹೆಸರು ಸೇರ್ಪಡೆಗೆ ಅನುಕೂಲವಾಗುವಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಭಾಗವಾಗಿ ವಾರಾಂತ್ಯದಲ್ಲಿ ವಿಶೇಷ ಅಭಿಯಾನ ನಡೆಸಲಾಗುವುದು ಎಂದು ತಿಳಿಸಿದೆ.
ವಾರಾಂತ್ಯದ ಶನಿವಾರ ಮತ್ತು ಭಾನುವಾರ ಎಸ್ಐಆರ್ ವಿಶೇಷ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಆಗಸ್ಟ್ 29 ಮತ್ತು 30 ರಂದು ಹಾಗೂ ಸೆಪ್ಟೆಂಬರ್ 19 ಮತ್ತು ಸೆಪ್ಟೆಂಬರ್ 20ರಂದು ಎಸ್ಐಆರ್ ವಿಶೇಷ ಅಭಿಯಾನ ನಡೆಯಲಿದೆ. ಈ ನಾಲ್ಕು ದಿನಗಳಂದು ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್ಒ) ಸಂಬಂಧಿಸಿದ ಮತಗಟ್ಟೆಗಳಲ್ಲಿ ಲಭ್ಯವಿರುತ್ತಾರೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.
ಎಸ್ಐಆರ್ ವಿಶೇಷ ಅಭಿಯಾನದ ಭಾಗವಾಗಿ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಬಿಎಲ್ಒ ಗಳ ಬಳಿ ಫಾರ್ಮ್-6, ಫಾರ್ಮ್ -6ಎ, ಫಾರ್ಮ್ -7 ಮತ್ತು ಫಾರ್ಮ್ -8 ನಮೂನೆಗಳು ಲಭ್ಯ ಇರುತ್ತವೆ. ಹೊಸ ಅಥವಾ ಯುವ ಮತದಾರರ ಹೆಸರು ಸೇರ್ಪಡೆ, ಎನ್.ಆರ್.ಐ., ಸಾಗರೋತ್ತರ ಮತದಾರರ ಸೇರ್ಪಡೆ, ಹೆಸರು ಡಿಲೀಟ್ ಹಾಗೂ ವಿವರ ತಿದ್ದುಪಡಿಗೆ ಬಿಎಲ್ಒ ಗಳನ್ನು ಭೇಟಿ ಮಾಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

