HomeKarnatakaಬೆಂಗಳೂರಲ್ಲಿ ಮತ್ತೊಂದು ಮರ್ಡರ್; ಪತ್ನಿಯನ್ನು ಲಾಡ್ಜ್‌ಗೆ ಕರೆದೊಯ್ದು ಉಸಿರುಗಟ್ಟಿಸಿ ಕೊಂದ ಪತಿ.!

ಬೆಂಗಳೂರಲ್ಲಿ ಮತ್ತೊಂದು ಮರ್ಡರ್; ಪತ್ನಿಯನ್ನು ಲಾಡ್ಜ್‌ಗೆ ಕರೆದೊಯ್ದು ಉಸಿರುಗಟ್ಟಿಸಿ ಕೊಂದ ಪತಿ.!

ಬೆಂಗಳೂರು/ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಲಾಡ್ಜ್‌ನಲ್ಲಿ ಮಹಿಳೆಯೊಬ್ಬರನ್ನು ಆಕೆಯ ಪತಿಯೇ ಹತ್ಯೆ ಮಾಡಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮುದುಗೆರೆ ನಿವಾಸಿ ವಿದ್ಯಾ (23) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.

ವಿದ್ಯಾ ಹಾಗೂ ಆನಂದ್ ನಾಲ್ಕು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ದಂಪತಿ ದೊಡ್ಡಬಳ್ಳಾಪುರದ ಗಾಂಧಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳೆದ ಆರು ತಿಂಗಳಿನಿಂದ ಇಬ್ಬರ ನಡುವೆ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳ ಹಿಂದೆ ವಿದ್ಯಾ ಪತಿಯನ್ನು ತೊರೆದು ಪಿಜಿಯೊಂದರಲ್ಲಿ ವಾಸವಾಗಿದ್ದರು. ಈ ನಡುವೆ ನಿನ್ನೆ ಆನಂದ್, ವಿದ್ಯಾಳನ್ನು ದೊಡ್ಡಬಳ್ಳಾಪುರದ ಎಸ್‌ಜಿಎಸ್ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಾಡ್ಜ್‌ನಲ್ಲಿ ವಿದ್ಯಾಳ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹತ್ಯೆ ಬಳಿಕ ಆಕೆಯ ಮೊಬೈಲ್ ಫೋನ್‌ನ್ನು ತೆಗೆದುಕೊಂಡು ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಹತ್ಯೆಗೆ ನಿಖರ ಕಾರಣ ಹಾಗೂ ಘಟನೆಯ ಸಂಪೂರ್ಣ ವಿವರಗಳು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.

ಪ್ರೇಮ ವಿವಾಹ ಮಾಡಿಕೊಂಡ ಯುವತಿ ಅಪಹರಣ; ಬೆಂಗಳೂರಲ್ಲಿ ಬೆನ್ನಟ್ಟಿದ ಕಾರು, 6 ಮಂದಿಗೆ ಗಾಯ

ಬೆಂಗಳೂರು: ಕುಟುಂಬದ ವಿರೋಧದ ನಡುವೆಯೂ ಪ್ರಿಯಕರನನ್ನು ಮದುವೆಯಾಗಿದ್ದ 21 ವರ್ಷದ ಯುವತಿಯನ್ನು ಆಕೆಯ ಕುಟುಂಬದವರು ಕಳುಹಿಸಿದ್ದರು ಎನ್ನಲಾದ ನಾಲ್ವರು ವ್ಯಕ್ತಿಗಳು ಬೆಂಗಳೂರಿನ ಮನೆಯಿಂದ ಬಲವಂತವಾಗಿ ಕರೆದೊಯ್ದ ಘಟನೆ ನಡೆದಿದೆ. ಯುವತಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಸ್ಥಳೀಯರು ವಾಹನವನ್ನು ಬೆನ್ನಟ್ಟಿದ್ದು, ಕಾರು ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಗಾಯಗೊಂಡಿದ್ದಾರೆ.

ರಾಜಸ್ಥಾನ ಮೂಲದ ಪೂಜಾ (21) ಅವರು ಅದೇ ರಾಜ್ಯದ 23 ವರ್ಷದ ಓಂ ಪ್ರಕಾಶ್ ಅವರನ್ನು ಸುಮಾರು 8–9 ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಕುಟುಂಬದ ವಿರೋಧದ ನಡುವೆಯೇ ಮದುವೆಯಾಗಿದ್ದ ಈ ದಂಪತಿ ಬಳಿಕ ಬೆಂಗಳೂರಿಗೆ ಬಂದು ನೆಲೆಸಿದ್ದರು.

ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿರುವ ದಂಪತಿಯ ಮನೆಗೆ ಬುಧವಾರ ಸಂಜೆ ನಾಲ್ವರು ವ್ಯಕ್ತಿಗಳು ಆಗಮಿಸಿದ್ದರು. ಕುಟುಂಬದವರು ಕಳುಹಿಸಿದ್ದರು ಎನ್ನಲಾದ ಅವರು ಪೂಜಾಳನ್ನು ಬಲವಂತವಾಗಿ ಹ್ಯುಂಡೈ ವೆನ್ಯೂ ಕಾರಿನಲ್ಲಿ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿ ಕೂಗಿಕೊಂಡಿದ್ದನ್ನು ಕೇಳಿದ ಸ್ಥಳೀಯರು ಕಾರನ್ನು ತಡೆಯಲು ಪ್ರಯತ್ನಿಸಿದ್ದಾರೆ.

ಆದರೆ ಆರೋಪಿಗಳು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದು, ಸ್ಥಳೀಯರು ತಮ್ಮ ವಾಹನಗಳಲ್ಲಿ ಕಾರನ್ನು ಬೆನ್ನಟ್ಟಿದ್ದಾರೆ. ರಾತ್ರಿ ಸುಮಾರು 8 ಗಂಟೆ ವೇಳೆಗೆ ಕಾರು ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದು, ಓರ್ವ ಮಹಿಳೆಗೆ ತಲೆಗೆ ಗಂಭೀರ ಗಾಯವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳೀಯರಿಂದ ಕಾರು ಬೆನ್ನಟ್ಟಿ ಯುವತಿ ರಕ್ಷಣೆ

ಯುವತಿಯನ್ನು ಕರೆದೊಯ್ಯುತ್ತಿದ್ದ ಕಾರನ್ನು ಸ್ಥಳೀಯರು ಬೆನ್ನಟ್ಟಿದ್ದಾರೆ. ಸಮೀಪದ ಪ್ರದೇಶವೊಂದರಲ್ಲಿ ಕಾರನ್ನು ತಡೆಯಲು ಸ್ಥಳೀಯರು ಕಲ್ಲು ತೂರಿದ ಬಳಿಕ ವಾಹನವನ್ನು ನಿಲ್ಲಿಸಲಾಗಿದೆ. ನಂತರ ಪೂಜಾಳನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.

ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೊಂಡಿದ್ದರೂ, ಇದುವರೆಗೆ ಆರು ಮಂದಿ ಗಾಯಗೊಂಡಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ಕಾರು ಪರಾರಿಯಾಗಲು ಯತ್ನಿಸಿದ ವೇಳೆ ಕೆಲವರು ವಾಹನದ ಚಕ್ರಗಳಡಿ ಸಿಲುಕಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

ಪೂಜಾಳನ್ನು ಕರೆದೊಯ್ಯಲು ಬಂದಿದ್ದ ನಾಲ್ವರನ್ನು ಸದ್ದಾಂ, ರಾಕೇಶ್, ಕರಣ್ ಮತ್ತು ಅಯಾನ್ ಎಂದು ಪೊಲೀಸರು ಗುರುತಿಸಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಸದ್ದಾಂ ಸದ್ಯ ತಲೆಮರೆಸಿಕೊಂಡಿದ್ದಾನೆ.

ರಾಜಸ್ಥಾನ ಮೂಲದ ರಾಕೇಶ್ (31), ಕರಣ್ (25) ಮತ್ತು ಅಯಾನ್ (18) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿ ಅಪಹರಣಕ್ಕೆ ಬಳಸಿದ್ದ ಹ್ಯುಂಡೈ ವೆನ್ಯೂ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.ವಿಜಯನಗರ ಪೊಲೀಸ್ ಠಾಣೆಯಲ್ಲಿ ಪೂಜಾ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಅಪಹರಣ ಮತ್ತು ಬಳಿಕ ಸಂಭವಿಸಿದ ವಾಹನ ಅಪಘಾತಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪೂಜಾ ಮತ್ತು ಓಂ ಪ್ರಕಾಶ್ ಅವರ ಪ್ರೇಮ ವಿವಾಹಕ್ಕೆ ಕುಟುಂಬದ ವಿರೋಧವೇ ಈ ಘಟನೆಗೆ ಪ್ರಮುಖ ಹಿನ್ನೆಲೆಯಾಗಿದ್ದು, ಯುವತಿಯನ್ನು ಬೆಂಗಳೂರಿನಿಂದ ಕರೆದೊಯ್ಯಲು ಕುಟುಂಬದವರು ನಡೆಸಿದ ಪ್ರಯತ್ನದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular