ಬೆಂಗಳೂರು: ಸ್ವಿಗ್ಗಿ ಇನ್‌ಸ್ಟಾಮಾರ್ಟ್, ಬ್ಲಿಂಕಿಟ್‌ನಂತಹ ಕ್ವಿಕ್ ಕಾಮರ್ಸ್ ಆ್ಯಪ್‌ಗಳು ಕೇವಲ ಹಾಲು-ಮೊಸರು ಮಾರಾಟಕ್ಕಷ್ಟೇ ಸೀಮಿತವಾಗಿಲ್ಲ ಎಂಬುದು ಈ ಬಾರಿಯ ಅಕ್ಷಯ ತೃತೀಯ ದಿನದಂದು ಸಾಬೀತಾಗಿದೆ. ಹಬ್ಬದ ದಿನದಂದು ಚಿನ್ನ ಮತ್ತು ಬೆಳ್ಳಿಯ ಆರ್ಡರ್‌ಗಳು ದಾಖಲೆ ಮಟ್ಟದಲ್ಲಿ ಏರಿಕೆಯಾಗುವ ಮೂಲಕ ಇಡೀ ಮಾರುಕಟ್ಟೆಯ ಚಿತ್ರಣವೇ ಬದಲಾಗಿದೆ.
ಇನ್‌ಸ್ಟಾಮಾರ್ಟ್‌ನಲ್ಲಿ ಚಿನ್ನದ ಬೇಟೆ
ಏಪ್ರಿಲ್ 19 ರಂದು ಇನ್‌ಸ್ಟಾಮಾರ್ಟ್‌ನಲ್ಲಿ ಒಟ್ಟಾರೆ ಬೇಡಿಕೆ 45 ಪಟ್ಟು ಹೆಚ್ಚಾಗಿತ್ತು. ವಿಶೇಷವಾಗಿ:
ಚಿನ್ನದ ಆರ್ಡರ್‌ಗಳು: 49 ಪಟ್ಟು ಏರಿಕೆ
ಬೆಳ್ಳಿಯ ಆರ್ಡರ್‌ಗಳು: 24 ಪಟ್ಟು ಏರಿಕೆ
ಜನರು 0.5 ಗ್ರಾಂ, 1 ಗ್ರಾಂ ಮತ್ತು 2 ಗ್ರಾಂನ ಚಿನ್ನದ ನಾಣ್ಯಗಳನ್ನು ಅತಿ ಹೆಚ್ಚು ಖರೀದಿಸಿದ್ದಾರೆ. ಇದರ ಜೊತೆಗೆ ಪ್ಲಾಟ್‌ಫಾರ್ಮ್ ನೀಡಿದ್ದ ‘ಪ್ರೈಸ್ ಲಾಕ್’ (Price Lock) ಫೀಚರ್ ಅನ್ನು ಶೇ. 40 ರಷ್ಟು ಜನರು ಬಳಸಿ ಲಾಭ ಪಡೆದಿದ್ದಾರೆ.
ಹಬ್ಬದ ಖರೀದಿ ಅಂದ್ರೆ ಬರಿ ಜ್ಯುವೆಲ್ಲರಿ ಶಾಪ್‌ಗೆ ಹೋಗಿ ಚಿನ್ನ ತರೋದು ಅಂದುಕೊಂಡಿದ್ದೀರಾ? ಹಾಗಿದ್ರೆ ಬೆಂಗಳೂರಿನ ಈ ಗ್ರಾಹಕನ ಶಾಪಿಂಗ್ ಲಿಸ್ಟ್ ಒಮ್ಮೆ ನೋಡಿ! ಈತ ಇನ್‌ಸ್ಟಾಮಾರ್ಟ್‌ನಲ್ಲಿ ಒಂದೇ ಆರ್ಡರ್‌ನಲ್ಲಿ ಬರೋಬ್ಬರಿ ₹1,99,917 ಮೊತ್ತದ ವಸ್ತುಗಳನ್ನು ಖರೀದಿಸಿ ದಾಖಲೆ ಬರೆದಿದ್ದಾನೆ.
ವಿಶೇಷ ಅಂದ್ರೆ, ಈ ಆರ್ಡರ್‌ನಲ್ಲಿ ₹1.65 ಲಕ್ಷದ ಬೆಳ್ಳಿಯ ಗಟ್ಟಿಗಳು ಮತ್ತು ₹31,800 ಮೌಲ್ಯದ ಚಿನ್ನದ ನಾಣ್ಯಗಳಿದ್ದವು. ಅಷ್ಟೇ ಅಲ್ಲ, ಅದೇ ‘ಕಾರ್ಟ್’ನಲ್ಲಿ ಹಬ್ಬದ ಅಡುಗೆಗೆ ಬೇಕಾದ ಅಲ್ಫೋನ್ಸೊ ಮಾವಿನಹಣ್ಣು, ತಂಪು ಪಾನೀಯ, ಐಸ್ ಕ್ಯೂಬ್‌ಗಳ ಜೊತೆಗೆ ಒಂದು ಸ್ಮಾರ್ಟ್ ವಾಚ್ ಮತ್ತು ವಾಟರ್ ಡಿಸ್ಪೆನ್ಸರ್ ಕೂಡ ಇತ್ತು! ಚಿನ್ನದ ಜೊತೆ ದಿನಸಿ ಸಾಮಗ್ರಿಗಳನ್ನು ಮನೆಬಾಗಿಲಿಗೇ ತರಿಸಿಕೊಳ್ಳುವ ಈ ಹೊಸ ಟ್ರೆಂಡ್, ಇಂದಿನ ಜನರ ಬದಲಾದ ಲೈಫ್‌ಸ್ಟೈಲ್‌ಗೆ ಸಾಕ್ಷಿಯಾಗಿದೆ.”
ಹಳೇ ಮಾರ್ಕೆಟ್ ವರ್ಸಸ್ ಹೊಸ ಟ್ರೆಂಡ್
ಒಂದೆಡೆ ಆನ್‌ಲೈನ್‌ನಲ್ಲಿ ಬೇಡಿಕೆ ಹೆಚ್ಚಿದ್ದರೆ, ಇತ್ತ ಸಾಂಪ್ರದಾಯಿಕ ಜ್ಯುವೆಲ್ಲರಿ ಅಂಗಡಿಗಳಲ್ಲಿ ಚಿನ್ನದ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಭಾರಿ ಬೆಲೆ: 10 ಗ್ರಾಂ ಚಿನ್ನದ ಬೆಲೆ ಸುಮಾರು ₹1.51 ಲಕ್ಷ ತಲುಪಿರುವುದರಿಂದ, ಈ ಬಾರಿ ಚಿನ್ನದ ಪ್ರಮಾಣದ (Volume) ಮಾರಾಟದಲ್ಲಿ 30% ಇಳಿಕೆಯಾಗಿದೆ.
ಆದರೂ, ಬೆಲೆ ಹೆಚ್ಚಳದಿಂದಾಗಿ ಒಟ್ಟಾರೆ ವಹಿವಾಟು ಕಳೆದ ವರ್ಷದ ₹16,000 ಕೋಟಿಯಿಂದ ಈ ಬಾರಿ ₹20,000 ಕೋಟಿ ದಾಟುವ ನಿರೀಕ್ಷೆಯಿದೆ.
ಜನರು ಈಗ ಭಾರಿ ಒಡವೆಗಳಿಗಿಂತ ಲೈಟ್ ವೇಟ್ ಜ್ಯುವೆಲ್ಲರಿ ಮತ್ತು ಚಿನ್ನದ ನಾಣ್ಯಗಳ ಮೇಲೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಬರಿ ಊಟವಲ್ಲ, ಈಗ ಎಲ್ಲವೂ ಮನೆ ಬಾಗಿಲಿಗೆ
ಜೊಮ್ಯಾಟೊ ಮಾಲೀಕತ್ವದ ಬ್ಲಿಂಕಿಟ್ ಮತ್ತು ಜೆಪ್ಟೋ ಕೂಡ ಈಗ ಬಟ್ಟೆ, ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳನ್ನು ಹಬ್ಬದ ಸಮಯದಲ್ಲಿ ಮಾರಾಟ ಮಾಡುತ್ತಿವೆ. ಟೈಟಾನ್ (ತನಿಷ್ಕ್) ಮತ್ತು ಕಲ್ಯಾಣ್ ಜ್ಯುವೆಲ್ಲರ್ಸ್‌ನಂತಹ ದೊಡ್ಡ ಸಂಸ್ಥೆಗಳೂ ಇನ್‌ಸ್ಟಾಮಾರ್ಟ್ ಜೊತೆ ಕೈಜೋಡಿಸಿರುವುದು ಈ ಬದಲಾವಣೆಗೆ ಸಾಕ್ಷಿ.
ಆದರೆ, ಎಚ್ಚರಿಕೆ ಕೂಡ ಅಗತ್ಯ
ಆನ್‌ಲೈನ್‌ನಲ್ಲಿ ಚಿನ್ನ ಖರೀದಿಸುವುದು ಸುಲಭವಾದರೂ ಕೆಲವು ಸವಾಲುಗಳಿವೆ:
ನಿಯಮಗಳ ಕೊರತೆ: ಡಿಜಿಟಲ್ ಗೋಲ್ಡ್ ಮಾರುಕಟ್ಟೆಯನ್ನು ಇನ್ನೂ ಆರ್‌ಬಿಐ (RBI) ಅಧಿಕೃತವಾಗಿ ನಿಯಂತ್ರಿಸುತ್ತಿಲ್ಲ, ಇದು ಹೂಡಿಕೆದಾರರಿಗೆ ಸಣ್ಣ ಮಟ್ಟದ ರಿಸ್ಕ್ ತರಬಹುದು.
ನಂಬಿಕೆ: ಹೆಚ್ಚಿನ ಮೊತ್ತದ ಖರೀದಿಗೆ ಜನರಿನ್ನೂ ಸಾಂಪ್ರದಾಯಿಕ ಅಂಗಡಿಗಳನ್ನೇ ನಂಬುತ್ತಾರೆ.
ಡೆಲಿವರಿ ಸವಾಲು: ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ತಲುಪಿಸುವುದು ಕಂಪನಿಗಳಿಗೆ ದೊಡ್ಡ ಜವಾಬ್ದಾರಿಯಾಗಿದೆ.

