ಬೆಂಗಳೂರು : ಬಿಜೆಪಿಯ ಅಪಪ್ರಚಾರಕ್ಕೆ ಅಭಿವೃದ್ದಿ ಕಾರ್ಯಗಳ ಮೂಲಕವೇ ಉತ್ತರ ನೀಡುತ್ತಿದ್ದೇವೆ. ನಮ್ಮ ಅಭಿವೃದ್ಧಿ ಕಾರ್ಯಗಳು ಜನರಿಗೆ ಮುಟ್ಟಿವೆ. ಜನ ನಮ್ಮ ಪರವಾಗಿದ್ದಾರೆ.ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಾಮಗಾರಿಗಳು ಆಗುತ್ತಿದ್ದು, ಈ ಬಾರಿಯ ಆಯವ್ಯಯದಲ್ಲಿ ಸುಮಾರು 82 ಸಾವಿರ ಕೋಟಿ ರೂ.ಗಳನ್ನು ಅಭಿವೃದ್ಧಿ ಕೆಲಸಗಳಿಗೆ ಮೀಸಲಿರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಪಾರೆಕೊಪ್ಪಲಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಡಿ ಕೈಗೊಂಡಿರುವ ₹419.78 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕುವೆಂಪು ಅವರು ವಿಶ್ವಮಾನವರಾಗುವ ಪ್ರಯತ್ನವನ್ನು ಮಾಡಿದ್ದರು. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿಸಬೇಕು ಎಂದು ಬಯಸಿದ್ದರು. ಎಲ್ಲರೂ ಮನುಷ್ಯರಾಗಿ ಬಾಳಬೇಕೆನ್ನುವ ಆಶಯವನ್ನು ಹೊಂದಿದ್ದ ಕುವೆಂಪು ಅವರ ಭವನ ಇಲ್ಲಿ ನಿರ್ಮಾಣವಾಗುತ್ತಿರುವುದು ಸ್ವಾಗತಾರ್ಹ ಎಂದರು.
ಬೆಟ್ಟದಪುರ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಬೆಟ್ಟಕ್ಕೆ ಹೋಗುವ ರಸ್ತೆ ನಿರ್ಮಾಣ ಕಾಮಗಾರಿಯನ್ನು 50 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಇದರಿಂದ ಸಹಸ್ರಾರು ಭಕ್ತರಿಗೆ ಅನುಕೂಲವಾಗಲಿದೆ.
ಸಚಿವರಾದ ವೆಂಕಟೇಶ್ ಅವರು ಪಿರಿಯಾಪಟ್ಟಣದ ಶಾಸಕರಾದ ನಂತರ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವರ ಶ್ರಮ ಶ್ಲಾಘನೀಯ ಎಂದರು. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಮೂರು ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು ಮುಂದೆಯೂ ಈ ಯೋಜನೆಗಳನ್ನು ಮುಂದುವರೆಸಲಾಗುವುದು. ನಮ್ಮ ಸರ್ಕಾರ ಅಭಿವೃದ್ಧಿಗೂ ಹಣವನ್ನು ಮೀಸಲಿರಿಸಿದೆ ಎನ್ನಲು ಇಂದು ಶಂಕುಸ್ಥಾಪನೆಯಾಗಿರುವ 419.78 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳೇ ಸಾಕ್ಷಿ ಎಂದರು.
ವಿರೋಧ ಪಕ್ಷಗಳು ಅನಗತ್ಯವಾಗಿ ಟೀಕೆ ಮಾಡುತ್ತಿದ್ದು ಅದರಲ್ಲಿ ಸತ್ಯಾಂಶವಿಲ್ಲ. ಟೀಕೆಗಳು ವಾಸ್ತವದ ನೆಲೆಗಟ್ಟಿನಲ್ಲಿರಬೇಕು. ಸುಳ್ಳು ಹೇಳುವುದನ್ನೇ ಕಸಬು ಮಾಡಿಕೊಳ್ಳದೆ ಕೈಗೊಂಡಿರುವ ಕೆಲಸಗಳ ಬಗ್ಗೆ ಮಾತನಾಡಬೇಕು. ಅವರು ಅಧಿಕಾರದಲ್ಲಿದ್ದಾಗ ನಾಲ್ಕು ವರ್ಷಗಳ ಕಾಲ ಏನು ಮಾಡಿದ್ದಾರೆಂದು ಜನರ ಮುಂದಿಡಬೇಕು. ನಾವು ಅಭಿವೃದ್ಧಿ ಕಾರ್ಯಗಳ ಮೂಲಕವೇ ಬಿಜೆಪಿಯ ಅಪಪ್ರಚಾರಕ್ಕೆ ಉತ್ತರ ಕೊಡುತ್ತಿದ್ದೇವೆ ಎಂದರು.

