ಬೆಂಗಳೂರು: ನಾನ್ ಕನ್ನಡಿಗರು ಕೆಲಸಕ್ಕೆ ಬೇಕು ಎಂದು ಬೆಂಗಳೂರಿನ ಖಾಸಗಿ ಕಂಪನಿಯೊಂದು ಪ್ರಕಟಿಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೆಲೆಯೂರಿರುವ ಖಾಸಗಿ ಕಂಪನಿಯೊಂದು ಹೆಚ್ ಆರ್ ಹುದ್ದೆಗೆ ನಾನ್ ಕನ್ನಡಿಗರು ಬೇಕು ಎಂದು ಪ್ರಕಟಣೆ ಹೊರಡಿಸಿದೆ. ಇದು ಕನ್ನಡಿಗರನ್ನು ಕೆರಳಿಸಿದೆ. ಕರ್ನಾಟಕದಲ್ಲಿಯೇ ಕಂಪನಿ ತೆಗೆದು ಈಗ ಕರ್ನಾಟಕದವರು ಕೆಲಸಕ್ಕೆ ಬೇಡ ಎಂದರೆ ಆ ಕಂಪನಿಯಾಕೆ ಇಲ್ಲಿರಬೇಕು? ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಿಡಿಕಾರಿದ್ದಾರೆ.
ಬೆಂಗಳೂರಿನ ಜೆ.ಪಿ ನಗರದಲ್ಲಿರುವ ಸ್ಕಿಲ್ ಸೋನಿಕ್ಸ್ ಎಂಬ ಕಂಪನಿ ಹೆಚ್ ಆರ್ ಹುದ್ದೆಗೆ ನೌಕ್ರಿ ಡಾಟ್ ಕಾಮ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಕನ್ನಡಿಗರನ್ನು ಹೊರತುಪಡಿಸಿ ಎಂದು ಪ್ರಕಟಣೆಯಲ್ಲಿ ನಮೂದಿಸಲಾಗಿದೆ. ಇದರಿಂದ ಸಿಡಿದೆದ್ದ ಕನ್ನಡಿಗರು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಿಗರ ನೆಲದಲ್ಲಿದ್ದುಕೊಂಡು ಕನ್ನಡಿಗರು ಉದ್ಯೋಗಕ್ಕೆ ಬೇಡ ಎನ್ನುತ್ತಿರುವ ಕಂಪನಿ ದುರುದ್ದೇಶಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


