HomeKarnatakaಜ.29ಕ್ಕೆ ಬಿಎಂಟಿಸಿ ಬಸ್ ಸಂಚಾರ ನಡೆಸಲ್ವಾ?,  ಬೆಂಗಳೂರು ಚಲೋ ಬಗ್ಗೆ ಬಿಎಂಟಿಸಿ ಖಡಕ್ ಎಚ್ಚರಿಕೆ

ಜ.29ಕ್ಕೆ ಬಿಎಂಟಿಸಿ ಬಸ್ ಸಂಚಾರ ನಡೆಸಲ್ವಾ?,  ಬೆಂಗಳೂರು ಚಲೋ ಬಗ್ಗೆ ಬಿಎಂಟಿಸಿ ಖಡಕ್ ಎಚ್ಚರಿಕೆ

ಸಾರಿಗೆ ನೌಕರರು ಜನವರಿ 29ರಂದು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ‘ಬೆಂಗಳೂರು ಚಲೋ’ ಪ್ರತಿಭಟನೆ ನಡೆಸಲಿದ್ದಾರೆ. ಆದ್ದರಿಂದ ಅಂದು ಸರ್ಕಾರಿ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ. ಬೆಂಗಳೂರು ನಗರದಲ್ಲಿ ಗುರುವಾರ ಬಿಎಂಟಿಸಿ ಬಸ್ ಸಂಚಾರ ನಡೆಸುವುದಿಲ್ಲವೇ?.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಎಲ್ಲಾ ಹಿರಿಯ/ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು, ಎಲ್ಲಾ ಹಿರಿಯ/ಘಟಕ ವ್ಯವಸ್ಥಾಪಕರು, ವಿಭಾಗೀಯ/ ಸಹಾಯಕ ಯಾಂತ್ರಿಕ ಅಭಿಯಂತರರು ಅವರುಗಳಿಗೆ ಪತ್ರವೊಂದನ್ನು ಬರೆದಿದ್ದಾರೆ.

ಈ ಪತ್ರವು ಕ.ರಾ.ರ.ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದಿನಾಂಕ.29.01.2026 ರಂದು ‘ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು ತತ್ಸಂಬಂಧ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಕುರಿತು ಎಂಬ ವಿಷಯ ಒಳಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕ.ರಾ.ರ.ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅವರು ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ದಿನಾಂಕ 01.01.2020 ರಿಂದ 28.02.2023 ರ ವರೆಗಿನ ವೇತನ ಪರಿಷ್ಕರಣೆಯ 38 ತಿಂಗಳ ವೇತನ ಹಿಂಬಾಕಿ ಮತ್ತು 01.01.2024 ರಿಂದ ನಾಲ್ಕು, ವರ್ಷಗಳ ವೇತನ ಒಪ್ಪಂದದ ಹಾಗೂ ಇತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ದಿನಾಂಕ.29.01.2026 ರಂದು ‘ಬೆಂಗಳೂರು ಚಲೋ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನೌಕರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿರುತ್ತಾರೆ. ಈ ಸಂಬಂಧ ಕೆಳಕಂಡ ಅಂಶಗಳನ್ನು ಬೆಂ.ಮ.ಸಾ.ಸಂಸ್ಥೆಯ ನೌಕರರ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.

* ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನಗರದ ಜನಸಾಮಾನ್ಯರಿಗೆ ಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದು ಅದಕ್ಕನುಗುಣವಾಗಿ ಘನ ಕರ್ನಾಟಕ ಸರ್ಕಾರವು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು ಕರ್ನಾಟಕ ಅಗತ್ಯ ಸೇವಾ ನಿರ್ವಹಣಾ ಕಾಯಿದೆ-2013 (Karnataka Act No-25/2015) ಯಡಿ ತಂದು ಅಧಿಸೂಚನೆಯನ್ನು ಹೊರಡಿಸಿದ್ದು, ಅದರನ್ವಯ ರಸ್ತೆ ಸಾರಿಗೆ ನಿಗಮಗಳ ನೌಕರರು ಯಾವುದೇ ಮುಷ್ಕರ ಹೂಡುವಂತಿಲ್ಲ ಮತ್ತು ಇತರೆ ಯಾವುದೇ ಸಂಘ ಸಂಸ್ಥೆ ಅಥವಾ ವ್ಯಕ್ತಿಗಳು ನಿಗಮದ ನೌಕರರು ಮುಷ್ಕರ ಹೂಡುವಂತೆ ಪ್ರಚೋದಿಸುವಂತಿಲ್ಲ. ಹಾಗೂ ಬೆಂಬಲವನ್ನು ಸಹ ವ್ಯಕ್ತಪಡಿಸುವಂತಿಲ್ಲ.

* ಅಲ್ಲದೇ, ಘನ ಕರ್ನಾಟಕ ಸರ್ಕಾರವು ಎಲ್ಲಾ ನಾಲ್ಕೂ, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು “ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ” ಎಂಬುದಾಗಿ ಸಹ ಘೋಷಿಸಿರುತ್ತದೆ.

ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಸಂಸ್ಥೆಯ ನೌಕರರು ಯಾವುದೇ ಕಾರಣಕ್ಕೂ ದಿನಾಂಕ 29.01.2026 ರಂದು ‘ಬೆಂಗಳೂರು ಚಲೋ’ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಮತ್ತು ತಮ್ಮ ದೈನಂದಿನ ಕರ್ತವ್ಯಕ್ಕೆ ಅವಶ್ಯ ಹಾಜರಾಗಿ, ರಾಜ್ಯದ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬೇಕಾಗಿ ಮನವಿ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೆಳಕಂಡ ನಿರ್ದೇಶನಗಳನ್ನು ನೀಡಲಾಗಿದೆ.

1. ದಿನಾಂಕ 29.01.2026 ರಂದು ಅನುಸೂಚಿಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು.

2, ದಿನಾಂಕ 29.01.2026 ರಂದು ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ರೀತಿಯ ರಜೆಯನ್ನು ಮಂಜೂರು ಮಾಡಬಾರದು.

3. ದಿನಾಂಕ 29.01.2026 ರಂದು ಕೆಲಸಕ್ಕೆ ಗೈರು ಹಾಜರಾಗುವ ನೌಕರರ ವಿರುದ್ಧ ‘ಕೆಲಸ ಮಾಡದಿದ್ದಾಗ ವೇತನವಿಲ್ಲ’ ಎಂಬ ಪ್ರಕಾರ ಕ್ರಮ ಕೈಗೊಳ್ಳುವುದು.

4. ಈ ಸೂಚನೆಗಳು ವಾರದ ರಜೆ ಮತ್ತು ಧೀರ್ಘಾವಧಿ ರಜೆಯಲ್ಲಿರುವ ನೌಕರರಿಗೆ ಅನ್ವಯಿಸುವುದಿಲ್ಲ ಆದರೆ, ಅನಿವಾರ್ಯ ಸಂದರ್ಭದಲ್ಲಿ ಅವಶ್ಯವಿದ್ದಲ್ಲಿ, ನೌಕರರ ವಾರದ ರಜೆಯನ್ನು ರದ್ದುಗೊಳಿಸಿ ಕರ್ತವ್ಯದ ಮೇಲೆ ನಿಯೋಜಿಸುವುದು.

5. ದಿನಾಂಕ.29.01.2026 ರಂದು ಕರ್ತವ್ಯಕ್ಕೆ ಗೈರುಹಾಜರಾಗುವ ನೌಕರರ ಪಟ್ಟಿಯಲ್ಲಿ ಘಟಕವಾರು/ ವರ್ಗಾವಾರು ಸಿದ್ಧಪಡಿಸಿ ಮೇಲೆ ತಿಳಿಸಿರುವಂತೆ ಕೆಲಸ ಮಾಡದಿದ್ದಾಗ ವೇತನವಿಲ್ಲ ಎಂಬ ಕ್ರಮ ಕೈಗೊಳ್ಳುವುದು.

ವಿಶೇಷ ಸೂಚನೆ : ರಾಜ್ಯದ ಉಚ್ಚ ನ್ಯಾಯಾಲಯದ ವಿಭಾಗೀಯ ನ್ಯಾಯಪೀಠವು ದಿನಾಂಕ 29.01.2004 ರಂದು Writ Appeal No-6347 of 2000 (LK) C/W Writ Appeal No-1005 and 1006 of 2001 ರಲ್ಲಿ ನೀಡಿದ ತೀರ್ಪಿನಲ್ಲಿ ಇಂತಹ ಸಂದರ್ಭಗಳಲ್ಲಿ ನೌಕರರು ತಮ್ಮ ದೈನಂದಿನ ಕರ್ತವ್ಯಕ್ಕೆ ಗೈರು ಹಾಜರಾದ ಪಕ್ಷದಲ್ಲಿ ಕೆಲಸ ಮಾಡದಿದ್ದಾಗ ವೇತನವಿಲ್ಲ ಎಂಬ ಸಾಮಾನ್ಯ ತತ್ವದನ್ವಯ ದಿನದ ವೇತನವನ್ನು ಕಡಿತಗೊಳಿಸುವುದರ ಜೊತೆಗೆ ಆಡಳಿತವರ್ಗವು ಅನಧಿಕೃತವಾಗಿ ಗೈರುಹಾಜರಾದ ನೌಕರರ ವಿರುದ ಶಿಸ್ತಿನ ಕ್ರಮ ಜರುಗಿಸಬಹುದಾಗಿದೆ ಎಂಬುದಾಗಿ ಆದೇಶಿಸಿದ್ದು ಈ ವಿಷಯವನ್ನು ಸಂಸ್ಥೆಯ ನೌಕರರ ಗಮನಕ್ಕೆ ಅವಶ್ಯ ತರುವುದು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular