ಮುಂಬೈನ ಬಾಂದ್ರಾದಲ್ಲಿ ಫುಡ್ ಲವರ್ಸ್‌ಗಳ ನಿದ್ದೆಗೆಡಿಸಿದ್ದ ಪ್ರಸಿದ್ಧ ಫುಡ್ ಜಾಯಿಂಟ್ ಬೆಣ್ಣೆ (Benne) ಈಗ ದೆಹಲಿಯ ಗ್ರೇಟರ್ ಕೈಲಾಶ್‌ಗೆ ಲಗ್ಗೆ ಇಟ್ಟಿದೆ.ಸದ್ಯ ದೆಹಲಿ ಜನ ಈ ಬೆಣ್ಣೆ ದೋಸೆಯ ರುಚಿ ನೋಡಲು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಅಷ್ಟಕ್ಕೂ ಬೆಂಗಳೂರಿನ ಈ ಸಾಂಪ್ರದಾಯಿಕ ದೋಸೆ ದೆಹಲಿಯಲ್ಲೂ ಇಷ್ಟೊಂದು ಕ್ರೇಜ್ ಸೃಷ್ಟಿಸಲು ಕಾರಣವೇನು? ಇಲ್ಲಿದೆ ಇಂಟರೆಸ್ಟಿಂಗ್ ಡಿಟೇಲ್ಸ್
ಏನಿದು ಬೆಣ್ಣೆ ದೋಸೆ?
ಬೆಣ್ಣೆ ಎಂಬುದು ಕನ್ನಡ ಪದ. ಇದರ ಅರ್ಥವೇ ಬಟರ್ (Butter). ಹೆಸರೇ ಸೂಚಿಸುವಂತೆ, ಇದು ಶುದ್ಧ ಕರ್ನಾಟಕ ಶೈಲಿಯ ದೋಸೆ. ಸಾಮಾನ್ಯ ದೋಸೆಗಳಿಗೆ ಎಣ್ಣೆ ಬಳಸುವ ರೂಢಿ ಇದ್ದರೆ, ಬೆಣ್ಣೆ ದೋಸೆಯಲ್ಲಿ ಎಣ್ಣೆಗೆ ಜಾಗವೇ ಇಲ್ಲ ಎನ್ನಬಹುದು. ಹಂಚಿನ ಮೇಲೆ ದೋಸೆ ಬೇಯಿಸುವಾಗಲೂ, ಬಡಿಸುವ ಮೊದಲುಗೂ ಧಾರಾಳವಾಗಿ ಬೆಣ್ಣೆಯನ್ನೇ ಬಳಸಲಾಗುತ್ತದೆ.
ಇದರಿಂದ ದೋಸೆಗೆ ವಿಶಿಷ್ಟ ಸುವಾಸನೆ ಬರುತ್ತದೆ. ಹೊರಭಾಗ ಚೆನ್ನಾಗಿ ಕ್ರಿಸ್ಪಿಯಾಗಿದ್ದು ಒಳಭಾಗ ಮೃದುವಾಗಿ ಸ್ಪಂಜಿನಂತಿರುತ್ತದೆ. ಹೆಸರೇ ಹೇಳುವಂತೆ, ಇಲ್ಲಿ ಬೆಣ್ಣೆಯೇ ನಿಜವಾದ ಅಧಿಪತಿ. ದೋಸೆ ಬೇಯುವಾಗ ಹಂಚಿನ ಮೇಲೆ ಬೆಣ್ಣೆ ಹರಿಯುವ ದೃಶ್ಯವೇ ನೋಡುವವರಿಗೆ ಹಸಿವು ಉಕ್ಕಿಸುತ್ತದೆ.
ಬಾಯಲ್ಲಿಟ್ಟರೆ ಕರಗುವಂತಿರುವ ಈ ದೋಸೆಯ ವಿಶೇಷತೆ ಎಂದರೆ ಬೇಯುವಾಗ ಹೊರಹೊಮ್ಮುವ ತಾಜಾ ಬೆಣ್ಣೆಯ ಸುಗಂಧ. ಇದೇ ಆ ಮ್ಯಾಜಿಕ್.ಗ್ರಾಹಕರನ್ನು ಮತ್ತೆ ಮತ್ತೆ ಆ ಬೆಣ್ಣೆ ದೋಸೆಯತ್ತ ಸೆಳೆಯುವ ಪ್ರಮುಖ ಕಾರಣ.
https://www.instagram.com/reel/DTHZUlQknqc/?utm_source=ig_web_copy_link
ಬೆಣ್ಣೆ ದೋಸೆಯ ಮೂಲ ಎಲ್ಲಿಂದ?
ಬೆಣ್ಣೆ ದೋಸೆಯ ಬೇರುಗಳು ಹಳೆಯ ಬೆಂಗಳೂರು ದರ್ಶಿನಿಗಳು ಮತ್ತು ಹೊಟೇಲ್‌ಗಳಲ್ಲಿ ಇವೆ. ವಿಶೇಷವಾಗಿ
ಬಸವನಗುಡಿಯ ವಿದ್ಯಾರ್ಥಿ ಭವನ
ಮಲ್ಲೇಶ್ವರದ ಸಿಟಿಆರ್ (Central Tiffin Room)
ಈ ಎರಡು ಕಡೆಗಳ ಬೆಣ್ಣೆ ದೋಸೆ ದೇಶಾದ್ಯಂತ ಪ್ರಸಿದ್ಧ. ಸರ್ವರ್‌ಗಳು ಒಂದೇ ಸಮಯದಲ್ಲಿ ಹಲವಾರು ದೋಸೆ ಪ್ಲೇಟ್‌ಗಳನ್ನು ಕೈಯಲ್ಲಿ ಹಿಡಿದು ಮಿಂಚಿನ ವೇಗದಲ್ಲಿ ಬಡಿಸುವ ದೃಶ್ಯಗಳು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ.ಕೈ ಮೇಲೆ ಹತ್ತಾರು ಪ್ಲೇಟ್‌ಗಳನ್ನು ಜೋಡಿಸಿಕೊಂಡು ಸರ್ವರ್‌ಗಳು ಮಿಂಚಿನ ವೇಗದಲ್ಲಿ ಬಡಿಸುವ ಆ ದೃಶ್ಯ ಈಗ ದೆಹಲಿಯಲ್ಲೂ ಟ್ರೆಂಡ್ ಆಗುತ್ತಿದೆ.
ಸಾಮಾನ್ಯ ದೋಸೆ ಮತ್ತು ಬೆಣ್ಣೆ ದೋಸೆಯ ನಡುವಿನ ವ್ಯತ್ಯಾಸ
ಹಿಟ್ಟು: ಬೆಣ್ಣೆ ದೋಸೆಯಲ್ಲಿ ಅಕ್ಕಿ ಉದ್ದಿನಬೇಳೆಯ ಜೊತೆಗೆ ಅವಲಕ್ಕಿ ಸೇರಿಸಲಾಗುತ್ತದೆ. ಇದರಿಂದ ದೋಸೆ ಮೃದುವಾಗಿರುತ್ತದೆ.
ಹದ: ಅಂಚುಗಳು ಕುರುಕಲು ಮಧ್ಯಭಾಗ ಮೃದುವಾಗಿರುತ್ತದೆ.
ತೈಲ ಬಳಕೆ: ಸಂಪೂರ್ಣವಾಗಿ ಬೆಣ್ಣೆಯಲ್ಲೇ ಬೇಯಿಸಲಾಗುತ್ತದೆ. ಸಾಮಾನ್ಯ ದೋಸೆಯಲ್ಲಿ ಎಣ್ಣೆ ಅಥವಾ ತುಪ್ಪ ಬಳಸಲಾಗುತ್ತದೆ.
ಇದರ ಜೊತೆ ಏನು ಬಡಿಸುತ್ತಾರೆ?
ಬೆಣ್ಣೆ ದೋಸೆಯ ವಿಶೇಷತೆ ಅದರ ಕಾಂಬಿನೇಷನ್‌ನಲ್ಲೂ ಇದೆ.ಕಾಯಿ ಚಟ್ನಿ,ದೋಸೆಯ ಮೇಲೆ ಒಂದು ಉಂಡೆ ತಾಜಾ ಬೆಣ್ಣೆ,ಆಲೂಗಡ್ಡೆ ಪಲ್ಯ ಅಥವಾ ಸಾಗು ಸಾಮಾನ್ಯವಾಗಿ ಸಾಂಬಾರ್ ಇರಲ್ಲ. ಇದು ಬೆಣ್ಣೆ ದೋಸೆಯ ಇನ್ನೊಂದು ವಿಶೇಷ
ಸೋಷಿಯಲ್ ಮೀಡಿಯಾ ಕ್ರೇಜ್
ಬೆಣ್ಣೆ ದೋಸೆ ಹೊಸದೇನಲ್ಲದಿದ್ದರೂ, ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಫುಡ್ ಬ್ಲಾಗರ್‌ಗಳು ಈ ದೋಸೆಯನ್ನು ನ್ಯಾಷನಲ್ ಲೆವೆಲ್‌ಗೆ ಕೊಂಡೊಯ್ದಿದ್ದಾರೆ. ನಮ್ಮ ಪ್ರಾದೇಶಿಕ ಆಹಾರದ ಮೇಲಿನ ಹೆಮ್ಮೆ ಮತ್ತು ವಿಶಿಷ್ಟ ರುಚಿ ಇಂದು ದೆಹಲಿ ಮಂದಿಯನ್ನು ಬಿಸಿಬಿಸಿ ಬೆಣ್ಣೆ ದೋಸೆಗಾಗಿ ಕಾದು ನಿಲ್ಲುವಂತೆ ಮಾಡಿದೆ.ವಿಶಿಷ್ಟ ರುಚಿ ಮತ್ತು ಫುಡ್ ಬ್ಲಾಗರ್‌ಗಳ ಪ್ರಭಾವದಿಂದಾಗಿ ಬೆಂಗಳೂರಿನ ಈ ಬೆಣ್ಣೆ ದೋಸೆ ಇಂದು ಮುಂಬೈ ಮತ್ತು ದೆಹಲಿಯಂತಹ ಮಹಾನಗರಗಳಲ್ಲೂ ಹೊಸ ಟ್ರೆಂಡ್ ಆಗಿದೆ.

