ಬೆಂಗಳೂರು- ಬೆಳಗಾವಿಯಲ್ಲಿ ನಡೆದ ಬಹುಕೋಟಿ ರೂಪಾಯಿ ಹೂಡಿಕೆ ವಂಚನೆ ಪ್ರಕರಣದಲ್ಲಿ ಜನರಿಂದ 2,459 ಕೋಟಿ ರೂ.ನಷ್ಟು ಸಂಗ್ರಹಿಸಿರುವ ಸಾಧ್ಯತೆ ಇದೆ ಎಂದು ತಿಳಿಸಿರುವ ಜಾರಿ ನಿರ್ದೇಶನಾಲಯ, ಆರೋಪಿಗಳಿಂದ 427 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ.
ಪ್ರಕರಣದ ಪ್ರಮುಖ ಆರೋಪಿ ಶಿವಾನಂದ ಸಿದ್ದಪ್ಪ ನೀಲನವರ ಹಾಗೂ ಅವರೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಸೇರಿದ ಒಟ್ಟು 427.16 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ-2002ರ ಅಡಿಯಲ್ಲಿ ಮಂಗಳೂರು ಜಾರಿ ನಿರ್ದೇಶನಾಲಯದ ಉಪ ವಲಯ ಕಚೇರಿ ಅ. 30ರಂದು ಈ ತಾತ್ಕಾಲಿಕ ಆಸ್ತಿ ಜಪ್ತಿ ಆದೇಶ ಹೊರಡಿಸಿದೆ. ಶಿವಂ ಅಸೋಸಿಯೇಟ್‌್ಸ ಮತ್ತು ಇತರರ ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಅಕ್ರಮವಾಗಿ ಗಳಿಸಲಾಗಿದೆ ಎನ್ನಲಾದ ಹಣದ ಒಟ್ಟು ಮೊತ್ತ ಸುಮಾರು 2,459 ಕೋಟಿ ರೂ. ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023, ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ-2019 ಹಾಗೂ ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ರಕ್ಷಣೆ ಕಾಯ್ದೆ-2004ರ ಅಡಿಯಲ್ಲಿ ದಾಖಲಾದ ಪ್ರಕರಣದ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತ್ತು.
ಮಾಹಿತಿ ಶೋಧ ಕಾರ್ಯಾಚರಣೆ
2026ರ ಆಗಸ್ಟ್‌ನಲ್ಲಿ ಬೆಳಗಾವಿ, ಚಿಕ್ಕೋಡಿ ಮತ್ತು ನಿಪ್ಪಾಣಿ ಸೇರಿದಂತೆ ಎಂಟು ಸ್ಥಳಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಹಲವು ಮಹತ್ವದ ದಾಖಲೆಗಳು, ಕೈಬರಹದ ಲೆಕ್ಕಪತ್ರಗಳು, ಮೊಬೈಲ್ ಸಾಧನಗಳು ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ವಿದ್ಯುನಾನ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಕ್ರಮವಾಗಿ ಗಳಿಸಿದ ಹಣದ ಉತ್ಪಾದನೆ, ವರ್ಗಾವಣೆ ಮತ್ತು ಹಂಚಿಕೆಗೆ ಸಂಬಂಧಿಸಿದ ಸಾಕ್ಷ್ಯಗಳು ಈ ದಾಖಲೆಗಳಿಂದ ಲಭ್ಯವಾಗಿವೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಇದಲ್ಲದೆ, ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಬ್ಯಾಂಕ್ ಖಾತೆಗಳು ಮತ್ತು ಸ್ಥಿರ ಠೇವಣಿಗಳಲ್ಲಿದ್ದ ಹೂಡಿಕೆದಾರರ ಹಣದಿಂದ ಬಂದಿದ್ದ 2.02 ಕೋಟಿ ರೂ.ಗಳನ್ನು ಸ್ಥಗಿತಗೊಳಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಶಿವಾನಂದ ಸಿದ್ದಪ್ಪ ನೀಲನವರ ಅವರನ್ನು 2026ರ ಆಗಸ್ಟ್ 13ರಂದು ಬಂಧಿಸಲಾಗಿತ್ತು. ಬಳಿಕ ಅ. 9ರಂದು ಐವರು ಆರೋಪಿಗಳು ಮತ್ತು ಸಂಬಂಧಿತ ಸಂಸ್ಥೆಗಳ ವಿರುದ್ಧ ಮಂಗಳೂರು ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಲಾಗಿದೆ.
ವಂಚನೆ ಜಾಲದ ವಿವರಗಳು
ತನಿಖೆಯ ಪ್ರಕಾರ, ಶಿವಾನಂದ ಸಿದ್ದಪ್ಪ ನೀಲನವರ ಮತ್ತು ಅವರ ಸಹಚರರು ವ್ಯವಸ್ಥಿತ ಹೂಡಿಕೆ ವಂಚನೆ ಜಾಲವನ್ನು ನಡೆಸುತ್ತಿದ್ದರು. ಸಾರ್ವಜನಿಕರಿಗೆ ತಿಂಗಳಿಗೆ ಶೇ.3ರಷ್ಟು ಖಚಿತ ಲಾಭ ಹಾಗೂ ಹೊಸ ಹೂಡಿಕೆದಾರರನ್ನು ಪರಿಚಯಿಸಿದವರಿಗೆ ಶೇ.0.5ರಷ್ಟು ಕಮಿಷನ್ ನೀಡುವುದಾಗಿ ಆಮಿಷವೊಡ್ಡಲಾಗಿತ್ತು.
ಈ ಮೂಲಕ 35 ಸಾವಿರಕ್ಕೂ ಅಧಿಕ ಸಾರ್ವಜನಿಕರಿಂದ ಸುಮಾರು 2,459 ಕೋಟಿ ರೂ. ಸಂಗ್ರಹಿಸಲಾಗಿತ್ತು. ಹೆಚ್ಚಿನ ಮತ್ತು ಖಚಿತ ಆದಾಯದ ಭರವಸೆ ನೀಡಿ ಸಾರ್ವಜನಿಕರನ್ನು ಹೂಡಿಕೆಗೆ ಪ್ರೇರೇಪಿಸಲಾಗಿತ್ತು. ಈ ಜಾಲದಲ್ಲಿ ನೀಲನವರ ಅವರು ಹೊಸ ಹೂಡಿಕೆದಾರರನ್ನು ಪರಿಚಯಿಸುವ ಮಧ್ಯವರ್ತಿಗಳನ್ನು ನಾಯಕರನ್ನಾಗಿ ನೇಮಿಸಿಕೊಂಡಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ವಿವಿಧ ಅಕ್ರಮ ಮಾರ್ಗಗಳ ಮೂಲಕ ವರ್ಗಾಯಿಸಲಾಗಿದೆ. ಹೆಚ್ಚಿನ ಅಪಾಯದ ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಸುಮಾರು 185.95 ಕೋಟಿ ರೂ. ಹೂಡಿಕೆ ಮಾಡಿ ನಷ್ಟ ಅನುಭವಿಸಲಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಇದಲ್ಲದೆ, ಸುಮಾರು 25 ಕೋಟಿ ರೂ.ಗಳನ್ನು ವಿವಿಧ ಸಹಕಾರಿ ಸಾಲ ಮತ್ತು ಪತ್ತಿನ ಸಂಸ್ಥೆಗಳ ಮೂಲಕ ವರ್ಗಾಯಿಸಿ, ಸ್ಥಿರ ಠೇವಣಿಗಳನ್ನು ಸೃಷ್ಟಿಸಲಾಗಿತ್ತು. ಈ ಠೇವಣಿಗಳನ್ನು ಆಧಾರವಾಗಿಟ್ಟುಕೊಂಡು ಸಾಲ ಪಡೆದು ಭೂಮಿಯನ್ನು ಖರೀದಿಸಲು ಬಳಸಲಾಗಿತ್ತು.
ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಪ್ರಮುಖ ಆರೋಪಿಯ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗಳಿಗೂ ವರ್ಗಾಯಿಸಲಾಗಿತ್ತು. ಅವರ ಪತ್ನಿ ಸಂಗೀತಾ, ಅಪ್ರಾಪ್ತ ಪುತ್ರ ಸಿದ್ಧಾಂತ್ ಸೇರಿದಂತೆ ಕುಟುಂಬದ ಸದಸ್ಯರ ಖಾತೆಗಳಿಗೆ ಹಣ ಹರಿಸಲಾಗಿದೆ.
ಶಿವಂ ಸೇವಾ (ಒಪಿಸಿ) ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ 19 ಕೋಟಿ ರೂ. ಸೇರಿದಂತೆ ಶಿವಂ ಲೈಫ್‌ಲೈನ್ ಪ್ರೈವೇಟ್ ಲಿಮಿಟೆಡ್ ಮತ್ತು ಶಿವಂ ಫುಡ್‌್ಸನಂತಹ ಉದ್ಯಮಗಳಿಗೂ ಹಣ ವರ್ಗಾಯಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಹಣ ಹಾಗೂ ಆಸ್ತಿ ಪತ್ತೆ
ತನಿಖೆಯ ವೇಳೆ ಅಕ್ರಮ ಹಣದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಖರೀದಿಸಲಾಗಿದೆ ಎಂದು ಗುರುತಿಸಲಾದ ಆಸ್ತಿಗಳನ್ನು ಪತ್ತೆ ಹಚ್ಚಲಾಗಿದೆ. ವಿವಿಧ ಬ್ಯಾಂಕ್‌ಗಳಲ್ಲಿ 367.77 ಕೋಟಿ ರೂ. ಮೌಲ್ಯದ ಸ್ಥಿರ ಠೇವಣಿಗಳಿವೆ. ಬ್ಯಾಂಕ್ ಖಾತೆಗಳಲ್ಲಿ 44.37 ಕೋಟಿ ರೂ. ಹಣವಿದೆ. ಕೃಷಿ ಜಮೀನು, ಕುಟುಂಬದ ಬಂಗಲೆಗಳು ಹಾಗೂ ನಿರ್ಮಾಣ ಹಂತದ ಅಪಾರ್ಟೆಂಟ್‌ಗಳಲ್ಲಿನ ಹೂಡಿಕೆ ಸೇರಿದಂತೆ 13.68 ಕೋಟಿ ರೂ. ಮೌಲ್ಯದ 42 ಸ್ಥಿರಾಸ್ತಿಗಳನ್ನು ಗುರುತಿಸಲಾಗಿದೆ. ಷೇರು ಮಾರುಕಟ್ಟೆಯಲ್ಲಿ 1.31 ಕೋಟಿ ರೂ. ಮೌಲ್ಯದ ಷೇರುಗಳು ಸೇರಿ ಒಟ್ಟು 427,16,37,165 ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಜಾರಿ ನಿರ್ದೇಶನಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.

