ಬೆಂಗಳೂರು: ಮಹಿಳಾ ಸುರಕ್ಷತೆ ಎಂಬುದು ಇಂದಿನ ಕಾಲದಲ್ಲಿಯೂ ಕನಸಿನ ಮಾಅತಾಗಿಯೇ ಉಳಿದಿದೆ. ಸಿಲಿಕಾನ್ ಸಿಟಿ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಮಹಿಳೆಯರು ಒಬ್ಬಂಟಿಯಾಗಿ ಓಡಾಡಲು ಭಯಭೀತರಾಗುವ ಸ್ಥಿತಿ ಮುಂದುವರೆದಿದೆ. ಇಲ್ಲೋರ್ವ ಕಾಮುಕ ಒಂಟಿ ಮಹಿಳೆಯರನ್ನು ಕಂಡರೆ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ. ಈ ವಿಕೃತ ವ್ಯಕ್ತಿಯನ್ನು ಸದ್ಯ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ವಿನೋದ್ ಬಂಧಿತ ಆರೋಪಿ. ಕಳೆದ ಒಂದು ತಿಂಗಳಿಂದ ರೋಡಿನಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷನಾಗುತ್ತಿದ್ದ ಈತ ಒಂಟಿಯಾಗಿ ಓಡಾಡುವ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಸಂಜೆ ವೇಳೆ ಒಂಟಿಯಾಗಿ ನಡೆದು ಹೋಗುವ ಮಹಿಳೆಯರಿರಲಿ, ಬೈಕ್ ಗಳಲ್ಲಿ ಹೋಗುವ ಮಹಿಳೆಯರಿರಲ್ಲಿ ಅವರನ್ನು ಅಡ್ಡಗಟ್ಟಿ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ. ಮಹಿಳೆಯರ ಖಾಸಗಿ ಅಂಗಗಳನ್ನು ಮುಟ್ಟಿ ಹಿಂಸಿಸುತ್ತಿದ್ದ.
ಡಿಸೆಂಬರ್ 2 ರಂದು ಸುಂಕದ ಕಟ್ಟೆಬಳಿ ಮಹಿಳೆಯೊಬ್ಬರು ಬೈಕ್ ನಲ್ಲಿ ಹೋಗುತ್ತಿದ್ದಾಗ ರಸ್ತೆಗುಂಡಿ ಇದ್ದುದರಿಂದ ಬೈಕ್ ನ್ನು ನಿಧಾನವಾಗಿ ಚಲಿಸುತ್ತಿದ್ದರು. ತಕ್ಷಣ ಓಡಿ ಬಂದ ವಿನೋಡ್ ಬೈಕ್ ಅಡ್ಡಗಟ್ಟಿ ನಿಲ್ಲಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಹಿಂದಿನಿಂದ ಕಾರಿನಲ್ಲಿ ಬರುತ್ತಿದ್ದ ಮಹಿಳೆಯ ಪತಿ ಆರೋಪಿಯನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಕಾಮುಕ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದಾನೆ. ತಕ್ಷಣ ಮಹಿಳೆ 112 ಗೆ ಕರೆ ಮಾಡಿ ದೂರು ನೀಡಿದ್ದರು. ಸದ್ಯ ಹೊಯ್ಸಳ ಪೊಲೀಸರ ಸಹಾಯದಿಂದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ಯಾರೂ ದೂರು ನೀಡಲ್ಲ, ಸಿಕ್ಕಿಬೀಳಲ್ಲ ಎಂಬ ಧೈರ್ಯದಿಂದ ಹೀಗೆ ವರ್ತಿಸುತ್ತಿದೆ ಎಂದು ಆರೋಪಿ ಹೇಳಿದ್ದಾನೆ ಎಂದು ತಿಳಿದುಬಂದಿದೆ.

