ಬಳ್ಳಾರಿ : ಬಳ್ಳಾರಿ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಜನಾರ್ಧನ ರೆಡ್ಡಿ ಮನೆ ಬಳಿ ಮತ್ತೊಂದು ಬುಲೆಟ್ ಪತ್ತೆಯಾಗಿದೆ.
ಬಳ್ಳಾರಿ ಫೈರಿಂಗ್ ಗಲಾಟೆಗೆ ಸಂಬಂಧಿಸಿದಂತೆ ಜನಾರ್ಧನ ರೆಡ್ಡಿ ಮನೆ ಬಳಿ ಬಾಂಬ್ ನಿಷ್ಕ್ರಿಯ ದಳ ಇಂದು ಬೆಳಗ್ಗೆಯಿಂದ ತಪಾಸಣೆ ನಡೆಸುತ್ತಿದ್ದು, ಇದೀಗ ಬುಲೆಟ್ ಪತ್ತೆಯಾಗಿದೆ . ರೆಡ್ಡಿ ಅವರ ಮನೆ ಮುಂದಿನ ಕಾಂಪೌಂಡ್ ಬಳಿ ಬುಲೆಟ್ ಪತ್ತೆಯಾಗಿದೆ. ಪತ್ತೆಯಾದ ಬುಲೆಟ್ 9 ಎಮ್ ಎಮ್ ಬುಲೆಟ್ ಎಂದು ತಿಳಿದು ಬಂದಿದೆ. ಬುಲೆಟ್ ವಶಕ್ಕೆ ಪಡೆದುಕೊಂಡ ಅಧಿಕಾರಿಗಳು ಪರಿಶೀಲನೆಗಾಗಿ ಎಫ್ ಎಸ್ ಎಲ್ ಗೆ ಕಳುಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ಜನವರಿ 1ರಂದು ನಡೆದಿದ್ದ ಗಲಾಟೆ ಹಾಗೂ ಫೈರಿಂಗ್ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ್ ರೆಡ್ದಿಯ ಮೂವರು ಖಾಸಗಿ ಗನ್ ಮ್ಯಾನ್ ಗಳನ್ನು ಪೊಲೀಸರು ಬಂಧಿಸಿದ್ದರು.ಕಾಂಗ್ರೆಸ್ ಶಾಸಕ ಭರತ್ ರೆಡ್ಡಿಯ ಆಪ್ತ ಸತೀಶ್ ರೆಡ್ಡಿಯ ಮೂವರು ಖಾಸಗಿ ಗನ್ ಮ್ಯಾನ್ ಗಳನ್ನು ಬಳ್ಳಾರಿ ಬ್ರೂಸ್ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಲ್ಜಿತ್ ಸಿಂಗ್, ಮಹೇಂದ್ರ ಸಿಂಗ್ ಹಾಗೂ ಗುರುಚರಣ ಸಿಂಗ್ ಬಂಧಿತ ಗನ್ ಮ್ಯಾನ್ ಗಳು. ಜನವರಿ 1ರಂದು ಬಳ್ಳಾರಿಯಲ್ಲಿ ನಡೆದಿದ್ದ ಗಲಾಟೆ ವೇಳೆ ಈ ಮೂವರು ಗನ್ ಮ್ಯಾನ್ ಗಳು ಫೈರಿಂಗ್ ನಡೆಸಿದ್ದರು. ಮೂವರೂ ಪಂಜಾಬ್ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ.ಬಳ್ಳಾರಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಕಾರ್ಯಕರ್ತರನ್ನೂ ಬಂಧಿಸಲಾಗಿದೆ. ಮೂವರು ಗನ್ ಮ್ಯಾನ್ ಗಳು ಸೇರಿ ಒಟ್ಟು 26 ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

