ಬಳ್ಳಾರಿ: ಗದಗ ಜಿಲ್ಲೆಯ ಐತಿಹಾಸಿಕ ಸ್ಥಳ ಲಕ್ಕುಂಡಿಯ ವೀರಭದ್ರಸ್ವಾಮಿ ದೇವಾಲಯದ ಬಳಿ ನಡೆಯುತ್ತಿರುವ ಉತ್ಖನನದ ವೇಳೆ ಮುತ್ತು, ಹವಳ, ಅಮೂಲ್ಯ ವಸ್ತುಗಳು, ಪುರಾತನ ವಸ್ತುಗಳು, ದೇವರ ವಿಗ್ರಹ ಪತ್ತೆಯಾಗುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿತ್ತು. ಇದರ ನಡುವೆಯೇ ಬಳ್ಳಾರಿಯಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ 5000 ವರ್ಷಗಳ ಹಿಂದಿನ ಮಾನವನ ಅಸ್ಥಿಪಂಜರ ಪತ್ತೆಯಾಗಿದೆ.
ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ಉತ್ಖನನ ನಡೆಸುತ್ತಿದ್ದ ವೇಳೆ ಸುಮಾರು 3-5 ಸಾವಿರ ವರ್ಷಗಳ ಹಿಂದಿನ ಮಾನವ ಅಸ್ಥಿಪಂಜರಗಳು ಪತ್ತೆಯಾಗಿದೆ. ಕಳೆದ ವಾರ ಉತ್ಖನನ ನಡೆಸುತ್ತಿದ್ದಾಗ ಮಾನವ ಮೂಳೆಗಳು ಕಂಡುಬಂದಿದ್ದು, ನಂತರ ಆಳವಾಗಿ ಅಗೆದಾಗ 5.5 ಅಡಿ ಉದ್ದದ ಸಂಪೂರ್ಣ ಅಸ್ಥಿಪಂಜರವು ಪತ್ತೆಯಾಗಿದೆ.
ಕಲ್ಲುಗಳನ್ನು ಇರಿಸಿ ಶವ ಸಂಸ್ಕಾರ ಮಾಡಿದ ಸ್ಥಿತಿಯಲ್ಲಿ ಈ ಅಸ್ಥಿಪಂಜರ ದೊರೆತಿದೆ. ಇದು ನೂತನ ಶಿಲಾಯುಗ ಕಾಲಕ್ಕೆ ಸಂಬಂಧಪಟ್ಟಿರಬಹುದು ಎಂದು ತಜ್ಞರು ಹೇಳಿದ್ದು, ನಿಖರವಾದ ಮಾಹಿತಿ ಪಡೆಯಲು ಕಾರ್ಬನ್ ಡೇಟಿಂಗ್ ಅಧ್ಯಯನ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಉತ್ಖನನದ ತಂಡದ ಸಹ ನಿರ್ದೇಶಕಿಯೂ ಆಗಿರುವ ಅಮೆರ್ಕಾದ ಹಾರ್ಟ್ ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯೂ ಆಗಿರುವ ನಮಿತಾ ಸುಗಂಧಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳ್ಳಾರಿಯ ತೆಕ್ಕಲಕೋಟೆಯ ಗೌಡ್ರ ಮೂಲೆ ಬೆಟ್ಟದಲ್ಲಿ ಉತ್ಖನನಕ್ಕೆ ಕೇಂದ್ರ ಪುರಾತತ್ವ ಇಲಕಹೆ ಹಾಗೂ ರಾಜ್ಯ ಪುರಾತತ್ವ ಇಲಾಖೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಉತ್ಖನನ ಕಾರ್ಯ ನಡೆಯುತ್ತಿದ್ದು, ಉತ್ಖನನದ ವೇಳೆ ಪುರಾತನ ಕಾಲದಲ್ಲಿ ಮಾನವರು ಬಳಸುತ್ತಿದ್ದ ವಸ್ತುಗಳು, ಮಾನವನ ಅಸ್ಥಿಪಂಜರ ಸೇರಿದಂತೆ ಹಲವು ವಸ್ತುಗಳು ಸಿಕ್ಕಿವೆ.

