ಬೆಳಗಾವಿ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆಯಾಗಿದ್ದು, ಹಲವೆಡೆ ಅವಂತರಗಳು ಸೃಷ್ಟಿಯಾಗಿವೆ. ಮನೆ ಮೇಲೆ ಮರ ಬಿದ್ದು, ತಾಯಿ ಹಾಗೂ ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ವರುಣಾರ್ಭಟ ಜೋರಾಗಿದ್ದು, ಬೈಲಹೊಂಗಲದಲ್ಲಿ ಮನೆ ಮೇಲೆ ತೆಂಗಿನ ಮರ ಬಿದ್ದು ತಾಯಿ ಹಾಗೂ ಮಗನ ಸ್ಥಿತಿ ಗಂಭಿರವಾಗಿದೆ.
ಬೈಲಹೊಂಗಲ ತಾಲೂಕಿನ ಅನಿಗೋಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೀಲವ್ವ ಯಲ್ಲಯ್ಯನವರ (70) ಮತ್ತು ಉಳವಪ್ಪ ಯಲ್ಲಯ್ಯನವರ (37) ಗಾಯಗೊಂಡವರು. ರಭಸವಾಗಿ ಬೀಸಿದ ಗಾಳಿ-ಮಳೆಯಿಂದ ಮನೆ ಪಕ್ಕದಲ್ಲಿದ್ದ ತೆಂಗಿನ ಮರ ಬೇರು ಸಮೇತ ಉರುಳಿ ಮನೆ ಮೇಲೆ ಬಿದ್ದಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ನೀಲವ್ವ ಅವರಿಗೆ ಗಾಯಗಳಾಗಿದ್ದು, ಮಗ ಉಳವಪ್ಪಗೂ ಗಾಯಗಳಾಗಿವೆ.
ಮರ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

