ನವದೆಹಲಿ: ಹಕ್ಕು ಉಲ್ಲಂಘನೆ ಆರೋಪದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಮಹಾರಾಷ್ಟ್ರ ಹಾಥಕಣಗಲೆ ಕ್ಷೇತ್ರದ ಸಂಸದ ಧೈರ್ಯಶೀಲ್ ಮಾನೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದಾರೆ.
ನವದೆಹಲಿಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾದ ಸಂಸದ ಧೈರ್ಯಶೀಲ್ ಮಾನೆ, ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಐಎಎಸ್ ಅಧಿಕಾರಿ ಮೊಹಮ್ಮದ್ ರೋಷನ್ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿದ್ದಾರೆ.
ಎಂಇಎಸ್ ಮತ್ತು ಬೆಳಗಾವಿಯ ಮರಾಠಿ ಜನರು ಪ್ರತಿ ವರ್ಷ ಬೆಳಗಾವಿಯಲ್ಲಿ ನವೆಂಬರ್ 1ರಂದು ಕರಾಳ ದಿನ ಆಚರಿಸುತ್ತಾರೆ, ಈ ದಿನದಂದು, ನಾನು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರಯಾಣಿಸುತ್ತಿದ್ದಾಗ, ಬೆಳಗಾವಿ ಜಿಲ್ಲೆಯ ಡಿಸಿ ಮೊಹಮ್ಮದ್ ರೋಷನ್ ಅವರು ಕರ್ನಾಟಕ ಗಡಿಯಲ್ಲಿ ಅಕ್ರಮವಾಗಿ ನೋಟೀಸ್ ಹೊರಡಿಸಿ ನನ್ನನ್ನು ಗಡಿ ಪ್ರದೇಶಕ್ಕೆ ಪ್ರವೇಶಿಸದಂತೆ ತಡೆದಿದ್ದಾರೆ.
ನನ್ನ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ಗಳಿಲ್ಲದಿದ್ದರೂ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸಲು ನನಗೆ ಅವಕಶ ನೀಡಿಲ್ಲ. ಇದರಿಂದ ನನಗೆ ಅನ್ಯಾಯವಾಗಿದೆ. ಈ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ, ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ವಿರುದ್ಧ ಹಕ್ಕು ಉಲ್ಲಂಘನೆ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡಿದ್ದಾರೆ.

