ಬೆಳಗಾವಿ: ಗೌರಿ ಗಣೇಶ ಹಬ್ಬದ ದಿನವೇ ಬೆಳಗಾವಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ವರು ಸಜೀವ ದಹನವಾಗಿದ್ದಾರೆ.
ಚವಾಟ ಗಲ್ಲಿಯಲ್ಲಿ ತಡರಾತ್ರಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ತಗುಲಿದ್ದು, ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದಾರೆ. ಅಗ್ನಿ ಅವಘಡದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಘಟನೆಯ ವಿವರ
ಬೆಳಗಾವಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ನಾಲ್ವರು ಸಜೀವ ದಹನವಾಗಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಬೆಳಗಾವಿಯ ಚವಾಟ ಗಲ್ಲಿಯಲ್ಲಿ ತಡರಾತ್ರಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ.
ಭಾರತಿ ರಾಜರಾಮ ದಾಮೋನೆ(50), ಶಾರದಾ ದಾಮೋನೆ(45), ಪ್ರಿಯಾ ಗಜಾನನ ದಾಮೋನೆ(28) ಗಂಗಾ ಗಜಾನನ(25) ಮೃತಪಟ್ಟವರು ಎಂದು ಹೇಳಲಾಗಿದೆ. ಗಜಾನನ ರಾಜರಾಮ ದಾಮೋನೆ(65), ರೋಷನ್(21) ಸ್ಥಿತಿ ಗಂಭೀರವಾಗಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಕೂಲಿ ಕೆಲಸ ಮಾಡಿಕೊಂಡು ಕುಟುಂಬದವರು ಜೀವನ ಸಾಗಿಸುತ್ತಿದ್ದರು. ತಡರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ದುರಂತ ಸಂಭವಿಸಿದೆ. ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಂಗಡಿಗಳ ಬೀಗ ಮುರಿದು ಕಳವು: ಕಾನೂನು ಸಂಘರ್ಷಕ್ಕೊಳಗಾದ ಬಾಲಕ ವಶಕ್ಕೆ
ಕೊಪ್ಪಳ: ನಗರದ ವಿವಿಧ ಕಿರಾಣಿ ಹಾಗೂ ಜನರಲ್ ಸ್ಟೋರ್‌ಗಳ ಬೀಗ ಮುರಿದು ಕಳವು ಹಾಗೂ ಕಳವಿಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೊಳಗಾದ ಬಾಲಕನೊಬ್ಬನನ್ನು ಕೊಪ್ಪಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು, ಆತನಿಂದ ₹60 ಸಾವಿರ ನಗದು ಹಾಗೂ ಕಳವಿಗೆ ಬಳಸಿದ್ದ ಸ್ಕೂಟಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಅವರು ತಿಳಿಸಿದರು.
ಅವರು ಸೋಮವಾರದಂದು ಎಸ್ಪಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸೆಪ್ಟೆಂಬರ್ 6ರಂದು ರಾತ್ರಿ ನಗರದ ತೆಗ್ಗಿನಕೇರಿಯ ಮಂಡಲಗೇರಿ ಕಾಂಪ್ಲೆಕ್ಸ್‌ನಲ್ಲಿರುವ ವೆಂಕಟೇಶ್ವರ ಕಿರಾಣಿ ಸ್ಟೋರ್‌ನ ಶಟರ್ ಕೀಲಿ ಮುರಿದು ಒಳ ಪ್ರವೇಶಿಸಿದ ಕಳ್ಳರು, ಕಬೋರ್ಡ್‌ನಲ್ಲಿದ್ದ ರೂ. 2.30 ಲಕ್ಷ ನಗದು ಹಣವನ್ನು ಕಳವು ಮಾಡಿದ್ದರು.
ಅದೇ ರೀತಿ ಸೆಪ್ಟೆಂಬರ್ 11ರಂದು ಬೆಳಗು ಮುಂಜಾನೆ 4 ಗಂಟೆಗೆ ಜೆ.ಪಿ. ಮಾರ್ಕೆಟ್‌ನ ಶ್ರೀ ವೀರಭದ್ರೇಶ್ವರ ಕಿರಾಣಿ ಅಂಗಡಿ ಹಾಗೂ ಆರ್.ಆರ್. ಜನರಲ್ ಸ್ಟೋರ್ ಗಳ ಬೀಗ ಮುರಿದು ನಗದು, ಬಾದಾಮಿ, ಏಲಕ್ಕಿ ಹಾಗೂ ರೂ.3000 ಹಾಗೂ ಒಂದು ಸ್ಯಾಮ್ಸಂಗ್ ಕಂಪನಿಯ ಗ್ಯಾಲಕ್ಸಿ ಮೊಬೈಲ್ ಎಸ್ -1 ಆಂಡ್ರಾಯ್ಡ್ ಮೊಬೈಲ್ ಸೇರಿದಂತೆ ಒಟ್ಟು 12,100 ರೂ. ಬೆಲೆ ಬಾಳುವ ವಿವಿಧ ವಸ್ತುಗಳನ್ನು ಕಳವು ಮಾಡಲಾಗಿತ್ತು. ನಗರದ ಮೆಹತಾ ಮಾರ್ಕೆಟ್, ಓಸಿಯಾ ಟ್ರೇಡರ್ಸ್ ಹಾಗೂ ಗೌರಿಶಂಕರ್ ಕಿರಾಣಿ ಅಂಗಡಿಗಳಲ್ಲಿಯೂ ಕಳವಿಗೆ ಯತ್ನಿಸಲಾಗಿತ್ತು.
ಈ ಸಂಬಂಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 121/2026 ಕಲಂ 331(4), 305 ಬಿಎನ್ ಎಸ್ ಹಾಗೂ ಗುನ್ನೆ ನಂಬರ್ 125/2026 ಕಲಂ 62,331(4), 305(5) ಬಿ ಎನ್ ಎಸ್ ರಡಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡು ಸೆಪ್ಟೆಂಬರ್ 13ರಂದು ಬೆಳಗಿನ ಜಾವ ಹೊಸಪೇಟೆಯ ಜಂಬುನಾಥ ರಸ್ತೆ ಬೈಪಾಸ್‌ನಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ವಶಕ್ಕೆ ಪಡೆದಿದ್ದು , ಅವರಿಂದ ₹60 ಸಾವಿರ ನಗದು ಹಾಗೂ ಕಳವಿಗೆ ಬಳಸಿದ್ದ ಸುಮಾರು ರೂ. 40 ಸಾವಿರ ಮೌಲ್ಯದ ಹೊಂಡಾ ಡಿಯೋ ಸ್ಕೂಟಿಯನ್ನು ಜಪ್ತಿ ಮಾಡಲಾಗಿದೆ.
ಬಾಲಕರನ್ನು ಕೊಪ್ಪಳ ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿ, ನ್ಯಾಯಾಲಯದ ಆದೇಶದಂತೆ ಬಳ್ಳಾರಿಯ ಬಾಲಕರ ಸರ್ಕಾರಿ ವೀಕ್ಷಣಾಲಯಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕ ಸಾಹಿಲ್ ಬಾಗ್ಲಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೇಮಂತ್ ಕುಮಾರ್ ಹಾಗೂ ಡಿವೈಎಸ್‌ಪಿ ಮುತ್ತಣ್ಣ ಪಿ. ಸರವಗೋಳ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ ಡಿ., ಪಿಎಸ್‌ಐ ಹೀರಪ್ಪ ನಾಯಕ, ಪಿಎಸ್ಐ ರೇವಣ್ಣ ಗುರಿಕಾರ, ಸಿಬ್ಬಂದಿಯಾದ ಮಂಜುನಾಥ್ ಸಿಪಿಸಿ 22, ಮಂಗಳೇಶ ಸಿಪಿಸಿ 459, ಗೂಡಸಾಬ್ ಸಿಪಿಸಿ 175, ತನಿಕಾ ಸಹಾಯಕರಾದ ಹನುಮಂತ ಹಕಾರಿ ಸಿ ಎಚ್ ಸಿ 207, ಕುಮಾರಸ್ವಾಮಿ ಸಿಂಪಡಿಸಿ 604, ಲಕ್ಷ್ಮಿ ದೇವಿ ಕೆ ಮಪಿ ಸಿ 24, ಅಧಿಕಾರಿ ಮತ್ತು ಸಿಬ್ಬಂದಿ ಯವರು ಶ್ರಮಿಸಿದ್ದು, ಪೊಲೀಸ್ ಸಿಬ್ಬಂದಿಯ ತಂಡ ಈ ಪ್ರಕರಣವನ್ನು ಭೇದಿಸಿದೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಹೇಮಂತ್ ಕುಮಾರ್, ಪಿ.ಐ ಸುರೇಶ್ ಡಿ, ಪಿ.ಎಸ್.ಐ ರೇವಣ್ಣ ಗುರಿಕಾರ್ , ಸೇರಿದಂತೆ ಇತರೆ ಪೊಲೀಸ್ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.

