ಬೆಳಗಾವಿ: ತಾನು ಜಮೀನಿನ ಮೂಲ ಮಾಲೀಕ ಎಂದು ಹೇಳಿಕೊಂಡು ಬೇರೊಬ್ಬರ ಆಸ್ತಿಯನ್ನು ಕಬಳಿಸಲು ಯತ್ನಿಸಿದ ಆರೋಪದ ಮೇಲೆ 64 ವರ್ಷದ ವ್ಯಕ್ತಿಯನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಚಂದ್ರಕಾಂತ ರಾಮಚಂದ್ರ ಬಡಮಂಜಿ (64), ಬಡಮಂಜಿ ಮಾಳಾ ಎಂದು ಗುರುತಿಸಲಾಗಿದೆ. ಈತ ಬೆಳಗಾವಿಯ ಉದ್ಯಮಬಾಗದ ನಿವಾಅಸಿ.
ಆರೋಪಿ ಚಂದ್ರಕಾಂತ್ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 250/2025 ದಾಖಲಿಸಲಾಗಿತ್ತು. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿತ್ತು.
ಆರೋಪಿಯು ಬೆಳಗಾವಿ ನಗರದ ಕೂಲೆಕುಂಬಿ ಗ್ರಾಮ ಹದ್ದಿಯಲ್ಲಿರುವ ಜಮೀನಿನ ಮಾಲೀಕನಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಳ್ಳಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ವೇಳೆ ಆರೋಪಿಯು ಮೂಲ ಮಾಲೀಕರಿಗೆ ಸೇರಿದ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು, ನಕಲಿ ದಾಖಲೆಗಳ ಆಧಾರದ ಮೇಲೆ ಆಸ್ತಿಯನ್ನು ವರ್ಗಾಯಿಸಲು ಪ್ರಯತ್ನಿಸಿದ್ದ ಎಂಬುದು ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖೆ ಮುಂದುವರಿದಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

