ಭಾರತೀಯ ಕ್ರಿಕೆಟ್ ತಂಡದ ಹಿರಿಯ ವೇಗಿ ಮಹಮ್ಮದ್ ಶಮಿ ಅವರನ್ನು ಆಯ್ಕೆಗಾರರು ನಿರ್ಲಕ್ಷಿಸುತ್ತಿದ್ದಾರೆ ಎಂಬ ಚರ್ಚೆಗಳ ನಡುವೆ, ಭಾರತ ತಂಡದ ಮಾಜಿ ನಾಯಕ ಹಾಗೂ ಪ್ರಸ್ತುತ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗೂಲಿ ಶಮಿ ಬೆಂಬಲಕ್ಕೆ ನಿಂತಿದ್ದಾರೆ. ಶಮಿ ಅವರ ದೇಶೀಯ ಕ್ರಿಕೆಟ್‌ನ ಪ್ರದರ್ಶನವನ್ನು ಶ್ಲಾಘಿಸಿರುವ ಗಂಗೂಲಿ, ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
2023ರ ಏಕದಿನ ವಿಶ್ವಕಪ್ ಬಳಿಕ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಮಿ, ಸುದೀರ್ಘ ವಿಶ್ರಾಂತಿಯ ನಂತರ 2025ರ ಆರಂಭದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಯಶಸ್ವಿ ಪುನರಾಗಮನ ಮಾಡಿದ್ದರು. ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಮಿ, ನಂತರದ ದಿನಗಳಲ್ಲಿ ನಿರಂತರವಾಗಿ ತಂಡದಿಂದ ಹೊರಗುಳಿಯಬೇಕಾಯಿತು. ವಯಸ್ಸು ಮತ್ತು ಫಿಟ್‌ನೆಸ್ ಕಾರಣಗಳಿಂದಾಗಿ ಅವರು ಟೆಸ್ಟ್ ಕ್ರಿಕೆಟ್ ಸರಣಿಗಳಲ್ಲಿ ಅವಕಾಶ ಪಡೆಯುವುದು ಸವಾಲಾಗಿ ಪರಿಣಮಿಸಿತ್ತು. ಆದಾಗ್ಯೂ ಶಮಿ ದೇಶೀಯ ಕ್ರಿಕೆಟ್‌ನಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು, ಇತ್ತೀಚೆಗೆ ದುಲೀಪ್ ಟ್ರೋಫಿಯಲ್ಲಿ ಈಸ್ಟ್ ಝೋನ್ ತಂಡದ ಪರ ಅದ್ಭುತ ಬೌಲಿಂಗ್ ನಡೆಸಿ 7 ವಿಕೆಟ್ ಕಬಳಿಸುವ ಮೂಲಕ ತಂಡದ ಚಾಂಪಿಯನ್ ಪಟ್ಟಕ್ಕೆ ನೆರವಾಗಿದ್ದಾರೆ.
ಶಮಿ ಅವರ ಈ ಶ್ರಮವನ್ನು ಕೊಂಡಾಡಿದ ಸೌರವ್ ಗಂಗೂಲಿ, ಶಮಿ ನಿರಂತರವಾಗಿ ದೇಶೀಯ ಪಂದ್ಯಗಳಲ್ಲಿ ಆಡುತ್ತಾ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದು ಸಂತಸ ತಂದಿದೆ. ಅವರು ಅಪಾರ ಸಾಧನೆ ಮಾಡಿದ ಮಹಾನ್ ಬೌಲರ್ ಎಂದು ಪ್ರಶಂಸಿಸಿದ್ದಾರೆ. ಇದೇ ವೇಳೆ 2027ರ ವಿಶ್ವಕಪ್‌ನಲ್ಲಿ ಶಮಿ ಆಡುವ ಬಗ್ಗೆ ಕೇಳಿದ ಪ್ರಶ್ನೆಗೆ, ಅದು ಇನ್ನು ಬಹಳ ದೂರದಲ್ಲಿದೆ. ಈಗಲೇ ಆ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಗಂಗೂಲಿ, ಶಮಿ ಅವರನ್ನು ಬಿಸಿಸಿಐ ನಿರ್ಲಕ್ಷಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕ್ರೀಡಾಪಟುಗಳಿಗೆ ವಯಸ್ಸಾಗುತ್ತಿದ್ದಂತೆ ಇಂತಹ ಸವಾಲುಗಳು ಬರುವುದು ಸಹಜ. ನಾನು 10,000 ರನ್ ಗಳಿಸಿದ ಮೇಲೆಯೂ ಏಕದಿನ ವಿಶ್ವಕಪ್ ತಂಡದಿಂದ ಹೊರಗುಳಿಯಬೇಕಾಗಿ ಬಂದಿತ್ತು. ಆದರೂ ನಾನು ಕಂಬ್ಯಾಕ್ ಮಾಡಿದೆ. ಕ್ರೀಡಾಪಟುಗಳ ಜೀವನದಲ್ಲಿ ಇಂತಹ ಹಂತಗಳು ಸಾಮಾನ್ಯ ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

