HomeKarnatakaಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ‘ಉದ್ಯೋಗ ನಿಧಿ’ ಯೋಜನೆಗೆ ಸಚಿವ ಸಂಪುಟ ಅಸ್ತು; 1 ಲಕ್ಷ ಹೊಸ...

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ‘ಉದ್ಯೋಗ ನಿಧಿ’ ಯೋಜನೆಗೆ ಸಚಿವ ಸಂಪುಟ ಅಸ್ತು; 1 ಲಕ್ಷ ಹೊಸ ಉದ್ಯೋಗ ಸೃಷ್ಟಿ

ಬೆಂಗಳೂರು: ಕರ್ನಾಟಕದಲ್ಲಿ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ‘ಉದ್ಯೋಗ ನಿಧಿ’ ಯೋಜನೆಗೆ ಮುಂದಾಗಿದೆ. ಕಡಿಮೆ ಅಭಿವೃದ್ಧಿ ಹೊಂದಿರುವ 11 ಜಿಲ್ಲೆಗಳಲ್ಲಿ 1 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿರುವ ಈ ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಯೋಜನೆಯಡಿ ಅರ್ಹ MSMEಗಳು ಹಾಗೂ ಕೈಗಾರಿಕಾ ಸಂಸ್ಥೆಗಳು ನೇಮಕ ಮಾಡಿಕೊಳ್ಳುವ ಪ್ರತಿ ಹೆಚ್ಚುವರಿ ಕಾರ್ಮಿಕರಿಗೆ ತಿಂಗಳಿಗೆ ₹2,500ರಂತೆ ಗರಿಷ್ಠ 24 ತಿಂಗಳವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಈ ಯೋಜನೆಗೆ ವಾರ್ಷಿಕ ಸುಮಾರು ₹305 ಕೋಟಿ ವೆಚ್ಚವಾಗಲಿದೆ.

ಉದ್ಯೋಗ ಸೃಷ್ಟಿ ಮತ್ತು ಕಾರ್ಮಿಕರಿಗೆ ವೇತನ ಪಾವತಿಯಾಗುತ್ತಿರುವುದನ್ನು ಪರಿಶೀಲಿಸಿದ ಬಳಿಕವೇ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗುತ್ತದೆ. ಹೀಗಾಗಿ, ಹೊಸ ಉದ್ಯೋಗಗಳನ್ನು ಸೃಷ್ಟಿಸಿ ಅವುಗಳನ್ನು ನಿರಂತರವಾಗಿ ಉಳಿಸಿಕೊಳ್ಳುವ ಉದ್ಯಮಗಳಿಗೆ ಮಾತ್ರ ಯೋಜನೆಯ ಪ್ರಯೋಜನ ದೊರೆಯಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

11 ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು

ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಬಾಗಲಕೋಟೆ ಸೇರಿದಂತೆ ರಾಜ್ಯದ ಕಡಿಮೆ ಅಭಿವೃದ್ಧಿ ಹೊಂದಿರುವ 11 ಜಿಲ್ಲೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ವಿಸ್ತರಣೆಗೆ ಈ ಯೋಜನೆ ಉತ್ತೇಜನ ನೀಡಲಿದೆ.

ಅಲ್ಲದೆ, ಸರ್ಕಾರದ ‘ಯುವ ನಿಧಿ’ ಯೋಜನೆಯೊಂದಿಗೆ ಸಮನ್ವಯ ಸಾಧಿಸುವ ಮೂಲಕ ಸ್ಥಳೀಯ ಯುವಜನರಿಗೆ ತಮ್ಮದೇ ಜಿಲ್ಲೆಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಗುರಿ ಹೊಂದಲಾಗಿದೆ.

ಯುವಜನರಿಗೆ ಸ್ಥಳೀಯವಾಗಿಯೇ ಉದ್ಯೋಗ

“ಹೂಡಿಕೆ ಮತ್ತು ಉದ್ಯೋಗಗಳನ್ನು ಯುವಜನರ ಮನೆಬಾಗಿಲಿಗೆ ತರುವುದು ನಮ್ಮ ಆದ್ಯತೆ. ತಮ್ಮದೇ ಪ್ರದೇಶದಲ್ಲಿ ಉತ್ತಮ ಅವಕಾಶಗಳನ್ನು ಪಡೆದು, ತಮ್ಮ ಭವಿಷ್ಯವನ್ನು ತಾವೇ ಕಟ್ಟಿಕೊಳ್ಳಲು ರಾಜ್ಯದ ಯುವಜನರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ನಮ್ಮ ಸಂಕಲ್ಪ” ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಒಟ್ಟಾರೆ, ಹಿಂದುಳಿದ ಜಿಲ್ಲೆಗಳಲ್ಲಿ ಕೈಗಾರಿಕಾ ಬೆಳವಣಿಗೆಗೆ ವೇಗ ನೀಡುವುದರ ಜೊತೆಗೆ ಸ್ಥಳೀಯ ಯುವಜನರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ‘ಉದ್ಯೋಗ ನಿಧಿ’ ಯೋಜನೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಡ್ರೋನ್ ಪರೀಕ್ಷಾ ಕೇಂದ್ರ ಸ್ಥಾಪನೆ.

ಕರ್ನಾಟಕವನ್ನು ಡ್ರೋನ್ ತಂತ್ರಜ್ಞಾನ, ಪರೀಕ್ಷೆ ಮತ್ತು ಪ್ರಮಾಣೀಕರಣದ ಪ್ರಮುಖ ಕೇಂದ್ರವನ್ನಾಗಿಸುವತ್ತ ಮತ್ತೊಂದು ಮಹತ್ವದ ಹೆಜ್ಜೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಜೀಡರಹಳ್ಳಿ ಗ್ರಾಮದಲ್ಲಿ ಡ್ರೋನ್ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಸುಮಾರು 19.26 ಎಕರೆ ಸರ್ಕಾರಿ ಜಮೀನಿನಲ್ಲಿ ನಿರ್ಮಾಣವಾಗಲಿರುವ ಈ ಕೇಂದ್ರಕ್ಕೆ ರಾಜ್ಯ ಸರ್ಕಾರ ₹42.83 ಕೋಟಿ ನೆರವು ನೀಡಲಿದೆ.

ಡ್ರೋನ್‌ಗಳ ಹಾರಾಟ ಪರೀಕ್ಷೆ, ಕಾರ್ಯಕ್ಷಮತೆ ಹಾಗೂ ಸುರಕ್ಷತಾ ಮೌಲ್ಯಮಾಪನ, ಪ್ರಮಾಣೀಕರಣ ಮತ್ತು BVLOS (ದೃಶ್ಯ ವ್ಯಾಪ್ತಿಯಾಚೆಗಿನ) ಹಾರಾಟ ಪರೀಕ್ಷೆಗಳಿಗೆ ಅಗತ್ಯವಿರುವ ಆಧುನಿಕ ಮೂಲಸೌಕರ್ಯವನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುವುದು. ನವೋದ್ಯಮಗಳು, ಕೈಗಾರಿಕೆಗಳು, ಶೈಕ್ಷಣಿಕ ಸಂಸ್ಥೆಗಳು, ರಕ್ಷಣಾ ಕ್ಷೇತ್ರ ಹಾಗೂ ಜಾಗತಿಕ ತಂತ್ರಜ್ಞಾನ ಸಂಸ್ಥೆಗಳಿಗೆ ಇದು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ.

ಬೆಂಗಳೂರು ಮಾತ್ರವಲ್ಲ — ಕರ್ನಾಟಕದ ಪ್ರತಿಯೊಂದು ಭಾಗವೂ ಹೈಟೆಕ್ ಉದ್ಯಮಗಳ ಬೆಳವಣಿಗೆಯ ಕೇಂದ್ರವಾಗಬೇಕು ಎಂಬುದು ನಮ್ಮ ಗುರಿ. ಚಿಕ್ಕಬಳ್ಳಾಪುರದ ಈ ಡ್ರೋನ್ ಪರೀಕ್ಷಾ ಕೇಂದ್ರವು ನವೋದ್ಯಮ, ಸಂಶೋಧನೆ ಮತ್ತು ಕೈಗಾರಿಕೆಯನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ.

ಡ್ರೋನ್ ತಂತ್ರಜ್ಞಾನದಲ್ಲಿ ಕರ್ನಾಟಕದ ಮುನ್ನಡೆಯನ್ನು ಮತ್ತಷ್ಟು ಬಲಪಡಿಸಿ, ಜಾಗತಿಕ ಮಟ್ಟದ ತಂತ್ರಜ್ಞಾನ ಮತ್ತು ನಾವೀನ್ಯತೆಯ ತಾಣವಾಗಿ ಕರ್ನಾಟಕವನ್ನು ರೂಪಿಸುವ ನಮ್ಮ ಪ್ರಯತ್ನ ಮುಂದುವರಿಯಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular