HomeKarnatakaದೀರ್ಘಾವಧಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಸವರಾಜ ರಾಯರೆಡ್ಡಿ ಪತ್ರ

ದೀರ್ಘಾವಧಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಸವರಾಜ ರಾಯರೆಡ್ಡಿ ಪತ್ರ

ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸಿಎಂ ಸಿದ್ದರಾಮಯ್ಯ ಜನವರಿ 6ರಂದು ಹೊಸ ದಾಖಲೆ ಬರೆದಿದ್ದಾರೆ. ಮುಖ್ಯಮಂತ್ರಿಗಳ ಅರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅಭಿನಂದನಾ ಪತ್ರವನ್ನು ಬರೆದಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀರ್ಘಾವಧಿ ಮುಖ್ಯಮಂತ್ರಿಯಾಗಿ ನಾಡಿಗೆ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಬಸವರಾಜ ರಾಯರೆಡ್ಡಿ ಪತ್ರ ಬರೆದು, ಕರ್ನಾಟಕದ ಸಾಮಾಜಿಕ ನ್ಯಾಯ ಹಾಗೂ ಜನಪರ ಸರ್ವಾಂಗೀಣ ಅಭಿವೃದ್ಧಿ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸುತ್ತಿರುವ ದೂರದೃಷ್ಟಿಯ ನಾಯಕತ್ವಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಬಸವರಾಜ ರಾಯರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಬರೆದ ಪತ್ರದ ಸಾರಾಂಶ ಹೀಗಿದೆ….

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕದ ರಾಜಕೀಯ ಇತಿಹಾಸವು ಜನಪರ ಆಡಳಿತ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಾತ್ಮಕ ಸಮಾನತೆಯ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ನಾಯಕರ ದಿಟ್ಟ ಹೋರಾಟಗಳಿಂದ ರೂಪುಗೊಂಡ ಸುವರ್ಣ ಪರಂಪರೆ ಹೊಂದಿದೆ. ಶೋಷಿತರು, ಹಿಂದುಳಿದವರು ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಪರವಾಗಿ ಧೈರ್ಯವಾಗಿ ನಿಂತ ನಾಯಕರಿಂದಲೇ ಈ ನಾಡಿನ ಪ್ರಗತಿಪರ ರಾಜಕೀಯ ಸಂಸ್ಕೃತಿ ಬೆಳೆದಿದೆ.

ಆ ಪರಂಪರೆಯಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಮಹಾನ್ ನಾಯಕರಲ್ಲಿ ದಿವಂಗತ ದೇವರಾಜ ಅರಸು ಅವರು ಅಗ್ರ ಗಣ್ಯರು. ಅವರು 20-03-1972 ರಿಂದ 31-12-1977 ರವರೆಗೆ ಹಾಗೂ 28-02-1978 ರಿಂದ 07-01-1980 ರವರೆಗೆ ಒಟ್ಟಾರೆ 2,792 ದಿನಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ, ಭೂ ಸುಧಾರಣೆ, ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಉನ್ನತಿ ಮತ್ತು ಶೋಷಿತರ ಸಬಲೀಕರಣದ ಮೂಲಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅಮರ ಅಧ್ಯಾಯವೊಂದನ್ನು ರಚಿಸಿದರು.

ಅದಲ್ಲದೆ ಕರ್ನಾಟಕ ರಾಜ್ಯವನ್ನು ಪ್ರಗತಿಪರ ಚಿಂತನೆಯತ್ತ ತರುವುದರಲ್ಲಿ ಹಿಂದಿನ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ ಇವರುಗಳ ವಿಶಾಲ ದೃಷ್ಟಿಕೋನದ ವಿಚಾರಗಳು ಹಾಗೂ ಪ್ರಾಮಾಣಿಕ ಚಿಂತನೆಗಳು ನಮ್ಮ ಮುಂದೆ ಇಂದಿಗೂ ಜೀವಂತ ಇರುತ್ತವೆ.

ಅದೇ ಸಾಮಾಜಿಕ ನ್ಯಾಯ ತಾತ್ವಿಕ ಮತ್ತು ರಾಜಕೀಯ ಪರಂಪರೆ ಮತ್ತು ಸರ್ವಾಂಗೀಣ ಅಭಿವೃದ್ಧಿ ಚಿಂತನೆಗಳನ್ನು ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಮುಂದುವರೆಸಿಕೊAಡು, ಕರ್ನಾಟಕದ ಇತಿಹಾಸಕ್ಕೆ ಹೊಸ ಮೈಲಿಗಲ್ಲು ಸ್ಥಾಪಿಸಿ ನೀವು 13-05-2013 ರಿಂದ 15-05-2018 ರವರೆಗೆ ಹಾಗೂ 20-05-2023 ರಿಂದ 06-01-2026 ರವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು, ಸುದೀರ್ಘ ಮತ್ತು ಸಾರ್ಥಕ ಆಡಳಿತದ ಮೂಲಕ ಚಾರಿತ್ರಿಕ ದಾಖಲೆ ನಿರ್ಮಿಸುತ್ತಿರುವುದು ರಾಜ್ಯದ ಜನತೆಗೆ ಅಪಾರ ಹೆಮ್ಮೆಯ ವಿಷಯವಾಗಿದೆ. ಹಾಗೂ ಮುಂದಿನ ಎರಡುವರೆ ವರ್ಷಗಳ ಕಾಲ ಅಂದರೆ 28 ಮೇ 2028 ರವರೆಗೆ ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರಿ ಎಂದು ನನ್ನ ನಂಬಿಕೆಯಾಗಿದೆ.

ನಿಮ್ಮ ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತವು ಸ್ಪಷ್ಟವಾಗಿ ಜನಪರ, ಸಂವಿಧಾನಬದ್ಧ ಮತ್ತು ಸಾಮಾಜಿಕ ನ್ಯಾಯ ಕೇಂದ್ರಿತವಾಗಿದೆ. ರಾಜ್ಯದ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದ ಜನಾಂಗಕ್ಕೆ ಯಾವುದೇ ಧರ್ಮ ಜಾತಿ ಭೇದವಿಲ್ಲದೆ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್, ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಹಾಗೂ ರೈತ ಸಮುದಾಯಕ್ಕೆ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ಬಡವರು, ಮಹಿಳೆಯರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಗೌರವವನ್ನು ಒದಗಿಸುವಲ್ಲಿ ನಿಮ್ಮ ಪ್ರಾಮಾಣಿಕ ವಿಚಾರಗಳು ಮಹತ್ವದ ಪಾತ್ರ ವಹಿಸಿದೆ.

ಈ ಯೋಜನೆಗಳು ಕರ್ನಾಟಕವನ್ನು ನಿಜಾರ್ಥದಲ್ಲಿ ಕಲ್ಯಾಣರಾಜ್ಯದ ಮಾದರಿಯಾಗಿ ರೂಪಿಸುವ ದಿಟ್ಟ ರಾಜಕೀಯ ಸಂಕಲ್ಪದ ಪ್ರತಿಬಿಂಬಗಳಾಗಿವೆ. ನಿಮ್ಮ ಆಡಳಿತದಲ್ಲಿ ಪಾರದರ್ಶಕತೆ, ಹಣಕಾಸು ಶಿಸ್ತು, ಸಂವಿಧಾನದ ಮೌಲ್ಯಗಳಿಗೆ ಅಚಲ ನಿಷ್ಠೆ ಹಾಗೂ ಜಾತಿ–ಧರ್ಮ–ಭಾಷೆಗಳ ಅತೀತವಾಗಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಸಮನ್ವಯದ ರಾಜಕಾರಣವು ನಿಮ್ಮ ನಾಯಕತ್ವದ ವಿಶಿಷ್ಟ ಗುರುತುಗಳಾಗಿವೆ.

ನಿಮ್ಮ ಸಮಾಜಮುಖಿ ಮತ್ತು ಪ್ರಗತಿಪರ ದೃಷ್ಟಿಕೋನಕ್ಕೆ ಸಮಕಾಲೀನ ರಾಜಕೀಯ ರೂಪ ನೀಡಿದ ನಾಯಕರೆಂದು ನಿಮ್ಮನ್ನು ಗೌರವದಿಂದ ಮುಂದಿನ ಇತಿಹಾಸ ಪುಟಗಳಲ್ಲಿ ಸ್ಮರಿಸುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಕೋಟ್ಯಂತರ ಜನತೆಯ ಪರವಾಗಿ, ನಿಮ್ಮ ದೂರದೃಷ್ಟಿಯ ನಾಯಕತ್ವಕ್ಕೆ, ಜನಪರ ನೀತಿಗಳಿಗೆ ಹಾಗೂ ರಾಜ್ಯವನ್ನು ಸಮಾನತೆ, ಸೌಹಾರ್ದ ಮತ್ತು ಸಾಮಾಜಿಕ ನ್ಯಾಯದ ದಾರಿಯಲ್ಲಿ ದಿಟ್ಟವಾಗಿ ಮುನ್ನಡೆಸುತ್ತಿರುವ ನಿಮ್ಮ ಅವಿರತ ಸೇವೆಗೆ ಗೌರವಪೂರ್ವಕ ಹಾಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ನಿಮ್ಮ ಆಡಳಿತವು ಮುಂದಿನ ಪೀಳಿಗೆಗಳಿಗೆ ದಾರಿದೀಪವಾಗಲಿ. ಕರ್ನಾಟಕವು ಸರ್ವಾಂಗೀಣ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸೌಹಾರ್ದದ ಮಾದರಿ ರಾಜ್ಯವಾಗಿ ರಾಷ್ಟçಮಟ್ಟದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ದೃಢಪಡಿಸಲಿ ಎಂಬುದು ನನ್ನ ಹಾರೈಕೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular