ಕಲಬುರಗಿ: ರಾಜ್ಯ ಕಾಂಗ್ರೆಸ್ ನಾಯಕರ ಕುರ್ಚಿ ಕಚ್ಚಾಟದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಟಿತವಾಗಿದೆ. ಇದು ನಾವು ಮಾತ್ರವಲ್ಲ ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಇದರಿಂದ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರೇ ಸ್ವತಃ ಪತ್ರ ಬರೆದಿದ್ದಾರೆ. ಸ್ಥಿರವಿಲ್ಲದ ಸರ್ಕಾರದಲ್ಲಿ ಸಹಜವಾಗಿಯೇ ಅಭಿವೃದ್ದಿ ಕುಂಠಿತವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಸಂಸದ ಬೊಮ್ಮಾಯಿ, ಕಾಂಗ್ರೆಸ್ ನಲ್ಲಿ ಹೈ ಇದೆ. ಕಮಾಂಡ್ ಇಲ್ಲವೇ ಇಲ್ಲ ಕಾಂಗ್ರೆಸ್ ನಲ್ಲಿ ಗೊಂದಲ ಇದೆ. ಕಾಂಗ್ರೆಸ್ ಹೈಕಮಾಂಡೇ ಎರಡು ಭಾಗ ಆಗಿ ಹೋಗಿದೆ. ರಾಜ್ಯದಲ್ಲಿ ಉಂಟಾಗಿರುವ ಗೊಂದಲದಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಪಾತ್ರ ಬಹಳ ದೊಡ್ಡದು ಎಂದರು.
ದ್ವೇಷ ಭಾಷಣ ವಿರುದ್ಧದ ವಿಧೆಯಕದ ಕುರಿತು ಮಾತನಾಡಿದ ಬೊಮ್ಮಾಯಿ, ಧ್ವೇಷ ಭಾಷಣ ಕಾಯ್ದೆ ಇದೊಂದು ದಮನಕಾರಿ ಕಾನೂನು. ದ್ವೇಷ ಭಾಷಣ ಅಂದರೆ ಏನು? ಎನ್ನುವ ವ್ಯಾಖ್ಯಾನ ದೊಡ್ಡ ಪ್ರಮಾಣದಲ್ಲಿ ಮಾಡಿದ್ದಾರೆ. ಯಾರನ್ನು ಯಾವಾಗ ಬೇಕಾದರೂ ಒಳಗೆ ಹಾಕುವ ರೀತಿ ಮಾಡಿದ್ದಾರೆ. ರಾಜ್ಯ ಸರಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಅಭಿವೃದ್ದಿ ಶೂನ್ಯವಾಗಿದೆ. ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಯಾರೂ ಇದನ್ನು ಪ್ರಶ್ನೆ ಮಾಡಬಾರದು ಅಂತ ಈ ಕಾಯ್ದೆ ಜಾರಿಗೆ ತರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರಚೋದನಕಾರಿಯಾಗಿ ಮಾತನಾಡಿದರೆ ಕ್ರಮಕ್ಕೆ ಈಗಾಗಲೇ ಬಿಎನ್ ಎಸ್ ಕಾಯಿದೆಯಲ್ಲಿ ಇದೆ. ಮತ್ತೆ ವಿಶೇಷ ಕಾನೂನು ತರುವ ಅಗತ್ಯ ಏನಿದೆ ? ವಿರೋಧ ಪಕ್ಷಗಳು ಸಣ್ಣ ಪುಟ್ಟ ಮಾತನಾಡಿದರೂ ಒಳಗೆ ಹಾಕಬಹುದು ಅಂತ ಈ ಕಾನೂನು ತರುತ್ತಿದ್ದಾರೆ. ತುರ್ತು ಪರಿಸ್ಥಿತಿಯ ಅವಧಿಯಲ್ಲೂ ಹೀಗೆ ಇರಲಿಲ್ಲ. ಇದು ಅಘೋಷಿತ ಅಲ್ಲ ಘೋಷಿತ ಎಮರ್ಜನ್ಸಿ, ನಾನೂ ರಾಜ್ಯಪಾಲರನ್ನು ಭೇಟಿ ಮಾಡುತ್ತೇನೆ. ಅಗತ್ಯ ಬಿದ್ದರೆ ಕಾನೂನು ಹೋರಾಟ ಸಹ ಮಾಡುತ್ತೇವೆ. ಕಾನೂನು ಯಾರ ಕೈಯಲ್ಲಿ ಇದೆ ಎನ್ನುವುದು ಮುಖ್ಯ. ಧ್ವೇಷ ರಾಜಕಾರಣ ಮಾಡುತ್ತಿರುವವರ ಕೈಯಲ್ಲಿ ಸದ್ಯ ಅಧಿಕಾರ ಇದೆ. ಹಾಗಾಗಿ ಹೊಸ ಕಾನೂನು ಆತಂಕಕಾರಿ ಎನ್ನುತ್ತಿದ್ದೇವೆ ಎಂದು ಹೇಳಿದರು.

