ಬ್ಯಾಂಕಾಕ್: ಬೃಹತ್ ಮೊತ್ತದ ಬಾರ್ ಬಿಲ್ ಪಾವತಿಸಲು ವಿಫಲವಾದ 18 ವರ್ಷದ ಯುವತಿಯ ತಲೆಯ ಕೂದಲನ್ನು ಸಿಬ್ಬಂದಿ ಎಲೆಕ್ಟ್ರಿಕ್ ರೇಜರ್ ಬಳಸಿ ಸಂಪೂರ್ಣವಾಗಿ ಬೋಳಿಸಿದ ಘಟನೆ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ವರದಿಗಳ ಪ್ರಕಾರ, ಆಗಸ್ಟ್ 25ರಂದು ಬ್ಯಾಂಕಾಕ್‌ನ ಪಿಂಕ್ಲಾವ್ ಪ್ರದೇಶದಲ್ಲಿರುವ ಜನಪ್ರಿಯ ಬಾರ್‌ಗೆ 18 ವರ್ಷದ ಯುವತಿ ನಕಲಿ ಗುರುತಿನ ಚೀಟಿ ಬಳಸಿ ಪ್ರವೇಶಿಸಿದ್ದಾಳೆ ಎನ್ನಲಾಗಿದೆ. ಅಲ್ಲಿ ಆಹಾರ ಮತ್ತು ಪಾನೀಯ ಸೇವಿಸಿದ ಬಳಿಕ ಆಕೆಯ ಬಿಲ್ ಸುಮಾರು ಸುಮಾರು ₹1.5 ಲಕ್ಷ ಆಗಿತ್ತು.
ಯುವತಿ ಬಿಲ್ ಪಾವತಿಸದೆ ಹೊರಹೋಗಲು ಪ್ರಯತ್ನಿಸುತ್ತಿದ್ದಾಳೆ ಎಂದು ಸಿಬ್ಬಂದಿಗೆ ತಿಳಿದ ಬಳಿಕ, ಆಕೆಯನ್ನು ತಡೆದು ವಿಚಾರಿಸಿದ್ದಾರೆ. ಆದರೆ ಪೊಲೀಸರಿಗೆ ಮಾಹಿತಿ ನೀಡುವ ಬದಲು, ಬಾರ್ ಸಿಬ್ಬಂದಿಯೇ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ವೇಳೆ ಯುವತಿಯನ್ನು ‘ಹೇರ್ ಪರ್ಚೇಸ್ ಕಾಂಟ್ರ್ಯಾಕ್ಟ್’ಗೆ ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗಿದೆ ಎಂದು ವರದಿಯಾಗಿದೆ. ನಂತರ ಸಿಬ್ಬಂದಿ ಆಕೆಯ ಭುಜದವರೆಗಿನ ಕಪ್ಪು ಕೂದಲನ್ನು ಎಲೆಕ್ಟ್ರಿಕ್ ರೇಜರ್‌ನಿಂದ ಸಂಪೂರ್ಣವಾಗಿ ತಲೆಯ ಚರ್ಮದವರೆಗೆ ಬೋಳಿಸಿದ್ದಾನೆ. ಆ ಕೂದಲನ್ನು ಮಾರಾಟ ಮಾಡಲು ಅಥವಾ ದಾನ ಮಾಡಲು ಬಳಸಲಾಗುತ್ತದೆ ಎಂದು ತಿಳಿದುಬಂದಿದೆ.
ವಿಡಿಯೋದಲ್ಲಿ ಬಿಳಿ ಬಣ್ಣದ ಸ್ಟ್ರಾಪ್‌ಲೆಸ್ ಉಡುಗೆ ಧರಿಸಿರುವ ಯುವತಿ ಕಾಣಿಸಿಕೊಂಡಿದ್ದು, ಕೂದಲು ಬೋಳಿಸಿಕೊಳ್ಳಲು ಒಪ್ಪಿಗೆ ನೀಡುತ್ತಿರುವಂತೆ ಕಂಡುಬರುತ್ತದೆ. ಈ ವೇಳೆ ಕ್ಯಾಮೆರಾದ ಹಿಂದಿರುವ ವ್ಯಕ್ತಿಯೊಬ್ಬ, “ನಾನು ನಿಮ್ಮನ್ನು ದುರುಪಯೋಗಪಡಿಸಿಕೊಳ್ಳುತ್ತಿಲ್ಲ. ಇದು ಮಾರುಕಟ್ಟೆ ದರ. ಇದನ್ನು ನಿಮಗಾಗಿ ದಾಖಲಿಸುತ್ತೇನೆ. ಇದಕ್ಕೂ ಹೆಚ್ಚುವರಿ ಮೊತ್ತ ಸೇರಿಸುತ್ತಿದ್ದೇನೆ. ಸರಿ?” ಎಂದು ಹೇಳುವುದು ಕೇಳಿಸುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಕೆಲವರು ಯುವತಿ ಕ್ರಿಮಿನಲ್ ಪ್ರಕರಣ ಎದುರಿಸುವುದಕ್ಕಿಂತ ಕೂದಲು ಕಳೆದುಕೊಂಡು ಪಾರಾಗಿದ್ದಾಳೆ ಎಂದು ಅಭಿಪ್ರಾಯಪಟ್ಟರೆ, ಮತ್ತೊಂದೆಡೆ ಬಾರ್ ಸಿಬ್ಬಂದಿಯ ಕ್ರಮವನ್ನು ಹಲವರು ತೀವ್ರವಾಗಿ ಖಂಡಿಸಿದ್ದಾರೆ.
“ಪೊಲೀಸರಿಗೆ ಏಕೆ ಕರೆ ಮಾಡಲಿಲ್ಲ? ಈ ವಿಷಯವನ್ನು ಪೊಲೀಸರೇ ನಿರ್ವಹಿಸಬೇಕಿತ್ತು. ನನ್ನ ಪ್ರಕಾರ ಇದು ಹಲ್ಲೆಗೆ ಸಮಾನ,” ಎಂದು ಓರ್ವ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬರು, ಇಂತಹ ಘಟನೆಗಳನ್ನು ಬಾರ್ ಸಿಬ್ಬಂದಿ ಮೊದಲೇ ಎದುರಿಸಿರುವಂತೆ ಕಾಣುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಬಿಲ್ ಪಾವತಿಸದ ವಿಚಾರಕ್ಕೆ ಯುವತಿಯ ಕೂದಲನ್ನು ತೆಗೆದುಕೊಂಡಿರುವ ಕ್ರಮವನ್ನು ಪ್ರಶ್ನಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಥಾಯ್ಲೆಂಡ್‌ನ ಸಾಮಾಜಿಕ ಅಭಿವೃದ್ಧಿ ಮತ್ತು ಮಾನವ ಭದ್ರತಾ ಸಚಿವಾಲಯ ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ವರದಿಯಾಗಿದೆ.

