ನವದೆಹಲಿ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್ 11ರಂದು ಬ್ಯಾಂಕ್ ನೌಕರರು ಮುಷ್ಕರ ಕೈಗೊಂಡಿದ್ದು, ಇದರಿಂದ 4 ದಿನ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ವಾರಕ್ಕೆ ಐದು ದಿನ ಕೆಲಸ, ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಧನ ಯೋಜನೆಯಲ್ಲಿನ ತಾರತಮ್ಯ ನಿವಾರಣೆ ಮತ್ತು ಹಳೆ ಪಿಂಚಣಿ ಯೋಜನೆ ಮರು ಜಾರಿ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ವತಿಯಿಂದ ಸೆಪ್ಟೆಂಬರ್ 11ರಂದು ದೇಶ ವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಸೆಪ್ಟೆಂಬರ್ 11 ಶುಕ್ರವಾರ ಮುಷ್ಕರ ನಡೆಯಲಿದ್ದು, ಸೆ. 12ರಂದು ಎರಡನೇ ಶನಿವಾರ, ಸೆ.13 ಭಾನುವಾರ ಹಾಗೂ ಸೆ. 14 ರಂದು ಗಣೇಶ ಚತುರ್ಥಿ ರಜೆ ಇರುವುದರಿಂದ ಸತತ ನಾಲ್ಕು ದಿನ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗಲಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸರ್ಕಾರ ಸ್ಪಂದಿಸದಿದ್ದರೆ ಸೆ. 28 ರಿಂದ ಮೂರು ದಿನ, ಅಕ್ಟೋಬರ್ 26 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ತಿಳಿಸಿದೆ.

