ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ದಕ್ಷಿಣ ಇರಾನ್‌ನಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಅಮೆರಿಕ ನಡೆಸಿದ ಕ್ಷಿಪಣಿ ದಾಳಿಯ ಚೂರುಗಳು ಮದುವೆ ಸಮಾರಂಭ ನಡೆಯುತ್ತಿದ್ದ ಮನೆಯೊಂದರ ಮೇಲೆ ಬಿದ್ದ ಪರಿಣಾಮ ಮಗು ಸೇರಿದಂತೆ ಕನಿಷ್ಠ ಐವರು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇರಾನಿಯನ್ ರೆಡ್ ಕ್ರೆಸೆಂಟ್ ಸಂಸ್ಥೆ ಮಂಗಳವಾರ ತಿಳಿಸಿದೆ.
ಮದುವೆ ಸಂಭ್ರಮದ ನಡುವೆ ಬಂದೆರಗಿದ ಸಾವು ಹಾರ್ಮುಜ್ ಜಲಸಂಧಿಯ ತೀರದಲ್ಲಿರುವ ಇರಾನ್‌ನ ಹೊರ್ಮೋಜ್‌ಗನ್ ಪ್ರಾಂತ್ಯದ ಸಿರಿಕ್ ಕೌಂಟಿಯ ‘ಕುಹೆಸ್ತಾಕ್’ ನಗರದಲ್ಲಿ ಈ ದುರ್ಘಟನೆ ನಡೆದಿದೆ. ವಸತಿ ಪ್ರದೇಶದ ಮನೆಯೊಂದರಲ್ಲಿ ಮದುವೆ ಸಂಭ್ರಮ ಮುಗಿಲುಮುಟ್ಟಿದ್ದ ಸಂದರ್ಭದಲ್ಲೇ, ಅಮೆರಿಕ ಕ್ಷಿಪಣಿಯ ಚೂರುಗಳು ಮನೆಗೆ ಅಪ್ಪಳಿಸಿವೆ. ಭಾರಿ ಸ್ಫೋಟಕ್ಕೆ ಮನೆಯ ಕಟ್ಟಡ ಛಿದ್ರವಾಗಿದ್ದು, ಸಂಭ್ರಮದಲ್ಲಿದ್ದ ಅತಿಥಿಗಳ ಚೀರಾಟ, ರೋದನ ಮುಗಿಲುಮುಟ್ಟಿತ್ತು. ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿವೆ.
ಇರಾನ್ ಆಕ್ರೋಶ: ಘಟನೆಯನ್ನು ಇರಾನ್ ಸರ್ಕಾರ ತೀವ್ರವಾಗಿ ಖಂಡಿಸಿದ್ದು, ನಾಗರಿಕರ ವಸತಿ ಪ್ರದೇಶದ ಮೇಲೆ ನಡೆದ ಈ ದಾಳಿಯನ್ನು “ಯುದ್ಧಾಪರಾಧ” ಎಂದು ಹೊರ್ಮೋಜ್‌ಗನ್ ಪ್ರಾಂತ್ಯದ ಉಪ ಗವರ್ನರ್ ಬಣ್ಣಿಸಿದ್ದಾರೆ. ಅಮೆರಿಕದ ಪಡೆಗಳು ಸಿರಿಕ್ ಕೌಂಟಿಯಲ್ಲಿ ನಿಖರವಾಗಿ ಯಾವ ಗುರಿಯನ್ನು ತಲುಪಲು ಈ ದಾಳಿ ನಡೆಸಿದ್ದವು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ದಾಳಿ–ಪ್ರತಿದಾಳಿ: ಉದ್ವಿಗ್ನ ಪರಿಸ್ಥಿತಿ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಸುತ್ತಮುತ್ತ ಎರಡೂ ದೇಶಗಳ ನಡುವೆ ಸಮರ ಕಹಳೆ ಮೊಳಗಿದೆ.
ಅಮೆರಿಕ ಸಮರ್ಥನೆ: ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳಿಗೆ ಕಡಲ ಗಣಿಗಳನ್ನು (Sea Mines) ಅಳವಡಿಸಲು ಯತ್ನಿಸಿದ್ದು ಹಾಗೂ ಜೋರ್ಡಾನ್‌ನಲ್ಲಿರುವ ಅಮೆರಿಕ ಸೇನಾ ನೆಲೆಯತ್ತ ಕ್ಷಿಪಣಿ ಹಾರಿಸಿದ್ದಕ್ಕೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್ ಪ್ರತಿದಾಳಿಗೆ ಮುಂದಾದರೆ ಇನ್ನಷ್ಟು ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಇರಾನ್ ಎಚ್ಚರಿಕೆ: ಅಮೆರಿಕ ತನ್ನ ಹೊಸ ದಾಳಿಗಳಿಗೆ ತಕ್ಕ ಬೆಲೆ ತೆರಬೇಕಾಗುತ್ತದೆ ಮತ್ತು ಆಕ್ರಮಣಕಾರರಿಗೆ ತೀವ್ರ ಶಿಕ್ಷೆ ಕಾದಿದೆ ಎಂದು ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ, ಪ್ರಾಂತ್ಯದಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ಮತ್ತು ಡ್ರೋನ್ ಕಾರ್ಯಾಚರಣೆ ಆರಂಭಿಸಿದೆ ಎಂದು ವರದಿಗಳು ತಿಳಿಸಿವೆ.

