ಬೆಂಗಳೂರು: ಯುಗಾದಿ ಹಬ್ಬದ ಸಂಭ್ರಮದಲ್ಲಿರುವ ರೈತರಿಗೆ ಬೆಂಗಳೂರು ಹಾಲು ಒಕ್ಕೂಟ (ಬಮುಲ್) ಭರ್ಜರಿ ಸಿಹಿ ಸುದ್ದಿ ನೀಡಿದೆ. ಹೈನುಗಾರಿಕೆಯನ್ನು ಅವಲಂಬಿಸಿರುವ ಲಕ್ಷಾಂತರ ರೈತರ ಹಿತದೃಷ್ಟಿಯಿಂದ ಹಾಲಿನ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್ಗೆ 1 ರೂಪಾಯಿ ಹೆಚ್ಚಳ ಮಾಡಿ ಒಕ್ಕೂಟದ ಆಡಳಿತ ಮಂಡಳಿ ಮಹತ್ವದ ತೀರ್ಮಾನ ಕೈಗೊಂಡಿದೆ.
ಯುಗಾದಿ ಹಬ್ಬದ ಸಂದರ್ಭದಲ್ಲಿ ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ತನ್ನ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಪ್ರತಿ ಲೀಟರ್ ಹಾಲಿಗೆ 1 ರೂಪಾಯಿ ಪ್ರೋತ್ಸಾಹ ಧನವನ್ನು ಹೆಚ್ಚಳ ಮಾಡುವುದಾಗಿ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಘೋಷಿಸಿದ್ದಾರೆ.ಈ ಬಾರಿ ಒಕ್ಕೂಟವು ಸುಮಾರು 60 ಕೋಟಿ ರೂಪಾಯಿಗಳಷ್ಟು ಲಾಭ ಗಳಿಸುವ ಹಂತಕ್ಕೆ ಬಂದಿದೆ. ಅಲ್ಲದೆ, 500 ಕೋಟಿ ರೂಪಾಯಿಗಳ ಹೆಚ್ಚುವರಿ ಟರ್ನ್ ಓವರ್ ಮಾಡುವ ಗುರಿಯನ್ನು ಹೊಂದಿದೆ.
ಬೋನಸ್ ಮತ್ತು ಡಿಎ: ಲಾಭದ ಹಿನ್ನೆಲೆಯಲ್ಲಿ ಸಿಬ್ಬಂದಿಗಳಿಗೆ ಬಾಕಿ ಇದ್ದ ಡಿಎ (DA) ನೀಡಲು ತೀರ್ಮಾನಿಸಲಾಗಿದೆ. ಇದರೊಂದಿಗೆ ಗುತ್ತಿಗೆದಾರರಿಗೂ 5,000 ರೂಪಾಯಿಗಳ ಬೋನಸ್ ಘೋಷಿಸಲಾಗಿದೆ.ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ಹೈನುಗಾರರಿಗೆ ಈ ಪ್ರೋತ್ಸಾಹ ಧನ ಹೆಚ್ಚಳದ ಲಾಭ ದೊರೆಯಲಿದೆ.
ಧನ ಸಹಾಯದ ಉದ್ದೇಶ: ಬೇಸಿಗೆಯ ಸಮಯದಲ್ಲಿ ಹಾಲಿನ ಉತ್ಪಾದನೆ ಕುಸಿಯುವ ಸಾಧ್ಯತೆ ಇರುವುದರಿಂದ ಮತ್ತು ಪಶು ಆಹಾರದ ಬೆಲೆ ಏರಿಕೆಯಿಂದ ರೈತರಿಗೆ ಆಗುವ ಹೊರೆಯನ್ನು ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.

