ಬಳ್ಳಾರಿ: ನಕಲಿ ಜಾತಿ ಪ್ರಮಾಣಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ) ಸೃಷ್ಟಿಸಿ ಸರ್ಕಾರದಿಂದ ಅಕ್ರಮವಾಗಿ ಅನುದಾನ ಪಡೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರಿಗೆ ಜಿಲ್ಲಾ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ಒಟ್ಟು ರೂ.25,000 ದಂಡ ವಿಧಿಸಿ ಆದೇಶ ಹೊರಡಿಸಿದೆ.
ಪ್ರಕರಣದ ಪ್ರಮುಖ ಆರೋಪಿತಳಾದ ಬಿ. ಗೀತಾ ಅಲಿಯಾಸ್ ಗೀತಮ್ಮ (ಗಂಡ: ನಾಗೇಶ) ಅವರ ತಾಯಿ ಪ್ರವರ್ಗ-3(ಎ) ವರ್ಗದ ‘ಬಲಿಜ’ ಜಾತಿಗೆ ಹಾಗೂ ತಂದೆ ಹನುಮಂತರೆಡ್ಡಿ ಪ್ರವರ್ಗ-3(ಎ) ವರ್ಗದ ‘ಹಿಂದೂ ರೆಡ್ಡಿ’ ಜಾತಿಗೆ ಸೇರಿದವರಾಗಿದ್ದಾರೆ. ಆರೋಪಿತಳಾಗಲೀ ಅಥವಾ ಆಕೆಯ ತಂದೆ-ತಾಯಿಯಾಗಲೀ ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲದಿದ್ದರೂ, ನಕಲಿ ಜಾತಿ ಪ್ರಮಾಣಪತ್ರ ಸೃಷ್ಟಿಸಿ ಸರ್ಕಾರದ ಅನುದಾನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಬಳ್ಳಾರಿಯ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 93/2020ರ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಹೆಚ್.ಎ. ಮೋಹನ್ ಅವರು, ಆರೋಪಿತಳಿಗೆ ಭಾರತೀಯ ದಂಡ ಸಂಹಿತೆ (ಭಾ.ದಂ.ಸಂ.) ಕಲಂ 198ರ ಅಡಿಯಲ್ಲಿ 2 ವರ್ಷಗಳ ಸರಳ ಕಾರಾಗೃಹ ಶಿಕ್ಷೆ ಮತ್ತು ರೂ.10,000 ದಂಡ ವಿಧಿಸಿದ್ದಾರೆ. ಅಲ್ಲದೆ, ಎಸ್ಸಿ/ಎಸ್ಟಿ ಕಾಯ್ದೆ, 2015ರ ಕಲಂ 3(1)(ಕ್ಯೂ) ಅಡಿಯಲ್ಲಿ 1 ವರ್ಷ ಸರಳ ಕಾರಾಗೃಹ ಶಿಕ್ಷೆ ಹಾಗೂ ರೂ.5,000 ದಂಡ ವಿಧಿಸಿದ್ದಾರೆ. ಒಟ್ಟಾರೆ ರೂ.25,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ತನಿಖೆಯ ಸಮಯದಲ್ಲಿ 4ನೇ ಆರೋಪಿ ಮೃತಪಟ್ಟಿದ್ದರಿಂದ ಅವರ ವಿರುದ್ಧದ ಪ್ರಕರಣ ರದ್ದುಗೊಂಡಿದ್ದು, 2ನೇ ಮತ್ತು 3ನೇ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಸಾಬೀತಾಗದ ಕಾರಣ ಅವರನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶೇಖರಪ್ಪ ಹಾಗೂ ಲಕ್ಷ್ಮಿದೇವಿ ಪಾಟೀಲ್ ಅವರು ವಾದ ಮಂಡಿಸಿದ್ದರು. ಅಂದಿನ ಬ್ರೂಸ್ಪೇಟೆ ಠಾಣೆಯ ಆರ್. ನಾಗರಾಜ್ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ದಾವಣಗೆರೆ ಸಿಐಡಿಯ ಪಿಐ ಹನುಮಂತಪ್ಪ ಶಿರಿಹಳ್ಳಿ ಹಾಗೂ ಪಿಐ ಎ. ಕೃಷ್ಣಾನಾಯಕ್ ಅವರು ತನಿಖೆ ನಡೆಸಿ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ಡಿವೈಎಸ್ಪಿ ವಿ. ರಘುಕುಮಾರ್ ಅವರ ಮಾರ್ಗದರ್ಶನದಲ್ಲಿ ಮುಖ್ಯ ಪೇದೆಗಳಾದ ಪಾಂಡುರಂಗ ಕೆ. ಹಾಗೂ ವೀರೇಶ್ ಬಾಬು ಅವರು ಸಾಕ್ಷಿಗಳನ್ನು ಹಾಜರುಪಡಿಸಲು ಸಹಕರಿಸಿದ್ದರು.
ಅ.13 ರಂದು ಪಿಂಚಣಿ ಅದಾಲತ್
ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಬಳ್ಳಾರಿ ಪ್ರಾದೇಶಿಕ ಕಚೇರಿ ವತಿಯಿಂದ ಪಿಂಚಣಿದಾರರ ಕುಂದು ಕೊರತೆ ಆಲಿಸಿ, ಪರಿಹರಿಸಲು ಅಕ್ಟೋಬರ್ 13 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ನಗರದ ಪ್ರಾದೇಶಿಕ ಕಚೇರಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಬಳ್ಳಾರಿ, ವಿಜಯನಗರ, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳ ಪಿಂಚಣಿದಾರರು ತಮ್ಮ ಕುಂದುಕೊರತೆಗಳಿದ್ದಲ್ಲಿ ಬಳ್ಳಾರಿ ಪ್ರಾದೇಶಿಕ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ಪತ್ರ ಅಥವಾ ಇ-ಮೇಲ್ ಮೂಲಕ ಪಿ.ಪಿ.ಒ ಸಂಖ್ಯೆ, ವಿಳಾಸ, ದೂರವಾಣಿ, ಮೊಬೈಲ್ ಸಂಖ್ಯೆ ಮತ್ತು ಕುಂದು ಕೊರತೆಯ ಸ್ವರೂಪ ಹಾಗೂ ಇತ್ಯಾದಿಗಳನ್ನು ಅಂಚೆ ಪತ್ರದ ಮೂಲಕ ಅಕ್ಟೋಬರ್ 10 ರೊಳಗಾಗಿ ರವಾನಿಸಬಹುದಾಗಿದೆ. ಪತ್ರ ಲಕೋಟೆ ಮೇಲೆ ಪಿಂಚಣಿ ಅದಾಲತ್ ಎಂದು ಬರೆಯಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.08392-268943 ಗೆ ಸಂಪರ್ಕಿಸಬಹುದು ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಕೆ.ವಿ ಪ್ರವೀಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

