ಬಳ್ಳಾರಿ: ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಹಿನ್ನೆಲೆಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಮನೆ ಬಳಿ ಬ್ಯಾನರ್ ಅಳವಡಿಕೆ ವಿಚಾರವಾಗಿ ಆರಂಭವಾದ ಗಲಾಟೆ, ಘರ್ಷಣೆಗೆ ತಿರುಗಿದ್ದು, ಈ ವೇಳೆ ಫೈರಿಂಗ್ ನಡೆದು ಗುಂಡೇಟು ತಗುಲಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆ ಬಳ್ಳಾರಿಯಲ್ಲಿ ಗಣಿ ಧಣಿ ಜನಾರ್ಧನ ರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ನಡುವಿನ ರಾಜಕೀಯ ಕೆಸರೆಚಾಟಕ್ಕೂ ಕಾರಣವಾಗಿದೆ.
ಬಳ್ಳಾರಿ ಗಲಾಟೆ ವೇಳೆ ನಡೆದ ಫೈರಿಂಗ್ ವಿಚಾರವಾಗಿ ಮಾತನಾಡಿದ್ದ ಶಾಸಕ ಜನಾರ್ಧನ ರೆಡ್ಡಿ ನನ್ನನ್ನು ಕೊಲ್ಲುವ ಉದ್ದೇಶದಿಂದಲೇ ಗುಂಡಿನ ದಾಳಿ ನಡೆಸಿದ್ದರು. ನನ್ನ ಮನೆ ಟಾರ್ಗೆಟ್ ಮಾಡಿ ದಾಳಿ ನಡೆದಿದೆ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ಇದಕ್ಕೆ ಪುಷ್ಠಿ ನೀಡುವಂತಹ ದೃಶ್ಯಗಳು ಲಭ್ಯವಾಗಿವೆ. ಬಳ್ಳಾರಿಯಲ್ಲಿ ನಿನ್ನೆ ನಡೆದಿದ್ದ ಗರ್ಷಣೆ, ಗಲಟೆ ವೇಳೆ ಶಾಸಕ ಜನಾರ್ಧನ ರೆಡ್ಡಿ ಮನೆಯತ್ತಲೇ ಗುಂಡಿನ ದಾಳಿ ನಡೆದಿದೆ.
ಸತೀಶ್ ರೆಡ್ಡಿ ಅವರ ಖಾಸಗಿ ಗನ್ ಮ್ಯಾನ್ ಓರ್ವ ಜನಾರ್ಧನ ರೆಡ್ಡಿ ನಿವಾಸದತ್ತ ಗುರಿ ಮಾಡಿ ಗುಂಡಿನ ದಾಳಿ ನಡೆಸಿದ್ದಾನೆ. ಒಂದು ಸುತ್ತು ಗುಂಡಿನ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ. ಗುಂಡಿನ ದಾಳಿಯಿಂದಾಗಿ ಜನಾರ್ಧನ ರೆಡ್ಡಿ ನಿವಾಸದ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಅಲ್ಲದೇ ನಿವಾಸದ ಆವರಣದಲ್ಲಿ ಬುಲೆಟ್ ಕೂಡ ಪತ್ತೆಯಾಗಿದೆ. ಇದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

