ಮಳೆಗಾಲದ ವಾತಾವರಣದಲ್ಲಿ ಅಥವಾ ಸಂಜೆಯ ವೇಳೆ ಕಾವಿ ಚಹಾದ ಜೊತೆ ಬಿಸಿಬಿಸಿಯಾದ ತಿಂಡಿ ಸವಿಯುವ ಖುಷಿಯೇ ಬೇರೆ. ಮನೆಯಲ್ಲೇ ಸರಳವಾಗಿ ಹಾಗೂ ರುಚಿಕರವಾಗಿ ಮಾಡಬಹುದಾದ ತಿನಿಸುಗಳಲ್ಲಿ ಬಾಳೆಕಾಯಿ ಬಜ್ಜಿ ಪ್ರಮುಖವಾದದ್ದು. ಅತಿ ಕಡಿಮೆ ಸಮಯದಲ್ಲಿ ಹಾಗೂ ಯಾವುದೇ ಹೋಟೆಲ್ ಶೈಲಿಗೆ ಕಡಿಮೆ ಇಲ್ಲದಂತೆ ಗರಿಗರಿಯಾಗಿ ಬಾಳೆಕಾಯಿ ಬಜ್ಜಿ ತಯಾರಿಸುವ ಸುಲಭ ವಿಧಾನ ಇಲ್ಲಿದೆ.
ಅಗತ್ಯವಿರುವ ಸಾಮಗ್ರಿಗಳು ಹಸಿ ಬಾಳೆಕಾಯಿ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಖಾರದ ಪುಡಿ, ಅರಿಶಿನ ಪುಡಿ, ಇಂಗ್ (ಹಿಂಗ್), ಅಡುಗೆ ಸೋಡಾ, ಓಂಕಾಳು (ಅಜ್ವೈನ್), ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕರಿಯಲು ಅಗತ್ಯವಿರುವಷ್ಟು ಎಣ್ಣೆ.
ತಯಾರಿಸುವ ವಿಧಾನ ಮೊದಲು ಬಾಳೆಕಾಯಿಯ ಸಿಪ್ಪೆಯನ್ನು ತೆಳುವಾಗಿ ತೆಗೆದು, ಉದ್ದವಾಗಿ ಅಥವಾ ದುಂಡಗೆ ತೆಳುವಾದ ಹೋಳುಗಳಾಗಿ ಹೆಚ್ಚಿ ನೀರಿಗೆ ಹಾಕಿಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಬಾಳೆಕಾಯಿ ಕಪ್ಪಾಗುವುದಿಲ್ಲ.
ನಂತರ ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಸ್ವಲ್ಪ ಅಕ್ಕಿ ಹಿಟ್ಟು, ಖಾರದ ಪುಡಿ, ಅರಿಶಿನ, ಇಂಗ್, ಓಂಕಾಳು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಸ್ವಲ್ಪ ನೀರು ಸೇರಿಸಿಕೊಂಡು ಹಿಟ್ಟು ತುಂಬಾ ತೆಳುವಾಗಿಯೂ ಇಲ್ಲದೆ ಗಟ್ಟಿಯಾಗಿಯೂ ಇಲ್ಲದೆ ಮಧ್ಯಮ ಹದಕ್ಕೆ ಕಲೆಸಿಕೊಳ್ಳಿ. ಕೊನೆಯಲ್ಲಿ ಚಿಟಿಕೆ ಅಡುಗೆ ಸೋಡಾ ಸೇರಿಸಿ ಕಲೆಸಿ.
ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಎಣ್ಣೆ ಕಾದ ನಂತರ ಹೆಚ್ಚಿಟ್ಟುಕೊಂಡ ಬಾಳೆಕಾಯಿ ಹೋಳುಗಳನ್ನು ಕಲೆಸಿದ ಹಿಟ್ಟಿನಲ್ಲಿ ಎರಡೂ ಕಡೆ ಚೆನ್ನಾಗಿ ಅದ್ದಿ, ಕಾದ ಎಣ್ಣೆಯಲ್ಲಿ ಬಿಡಿ. ಮಧ್ಯಮ ಉರಿಯಲ್ಲಿ ಎರಡೂ ಬದಿ ಹೊಂಬಣ್ಣ ಬರುವವರೆಗೆ ಕರಿದು ತೆಗೆದರೆ, ಬಿಸಿಬಿಸಿಯಾದ ಗರಿಗರಿ ಬಾಳೆಕಾಯಿ ಬಜ್ಜಿ ಸಿದ್ಧವಾಗುತ್ತದೆ.

