HomeKarnatakaತರಗತಿ ವೇಳೆಯೇ ಕುಸಿದು ಬಿದ್ದ ಸರ್ಕಾರಿ ಶಾಲೆ ಮೇಲ್ಛಾವಣಿ: 8 ಮಕ್ಕಳಿಗೆ ಗಾಯ; ಮುಖ್ಯ ಶಿಕ್ಷಕ...

ತರಗತಿ ವೇಳೆಯೇ ಕುಸಿದು ಬಿದ್ದ ಸರ್ಕಾರಿ ಶಾಲೆ ಮೇಲ್ಛಾವಣಿ: 8 ಮಕ್ಕಳಿಗೆ ಗಾಯ; ಮುಖ್ಯ ಶಿಕ್ಷಕ ಸೇರಿ ಮೂವರು ಸಸ್ಪೆಂಡ್

ಬಾಗಲಕೋಟೆ: ತರಗತಿ ನಡೆಸುತ್ತಿದ್ದ ವೇಳೆಯೇ ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದು, 8 ಮಕ್ಕಳು ಗಾಯಗೊಂಡಿರುವ ಘಟನೆ ನಡೆದಿದ್ದು, ಪ್ರಭಾರಿ ಮುಖ್ಯ ಶಿಕ್ಷಕ ಸೇರಿ ಮೂವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಸೆಪ್ಟೆಂಬರ್ 2ರಂದು ಶಾಲೆಯ ಮೇಲ್ಛಾವಣಿಯ ಒಂದು ಭಾಗ ಏಕಾಏಕಿ ಕುಸಿದು ಬಿದ್ದ ಪರಿಣಾಮ 8 ಮಕ್ಕಳು ಗಾಯಗೊಂಡಿದ್ದಾರೆ. ಘಟನೆ ಬೆನ್ನಲ್ಲೇ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಸೇರಿ ಮೂವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಪ್ರಭಾರಿ ಮುಖ್ಯಶಿಕ್ಷಕ ಸಿ.ಬಿ.ಹೆಳವರ ಅಮಾನತುಗೊಂಡವರು. ಶಾಲಾಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಸೀತಾರಾಮು ಅಮಾನತು ಆದೇಶ ಹೊರಡಿಸಿದ್ದಾರೆ. ಕೊಠಡಿಯ ಮೆಲ್ಛಾವಣಿ ದುರಸ್ತಿ ಹಂತದಲ್ಲಿದ್ದರೂ ಇಲಾಖೆಗೆ ತಿಳಿಸದೆ ಕರ್ತವ್ಯ ಲೋಪ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವೆ 1957ರ‌ ನಿಯಮ 10 (1) ರ‌ ಅನ್ವಯ ಅವರನ್ನು ಅಮಾನತು ಮಾಡಲಾಗಿದೆ.

ಶಾಲಾ ಕಟ್ಟಡದ ಫಿಟ್ನೆಸ್ ಬಗ್ಗೆ ಸರಿಯಾದ ಪ್ರಮಾಣಪತ್ರ ಕೊಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಪಿಆರ್​ಇಡಿ ಸಹಾಯಕ‌ ಕಾರ್ಯಪಾಲಕ ಇಂಜಿನಿಯರ್ ಎಸ್.ಎಂ.ರೇವಡಿ ಮತ್ತು ಜ್ಯೂನಿಯರ್ ಇಂಜಿನಿಯರ್ ಎಸ್.ಎಂ.ಸಂಗನಾಳ ಅವರನ್ನು ಕೂಡ ಅಮಾನತು ಮಾಡಿ ಬಾಗಲಕೋಟೆ ಜಿಲ್ಲಾಪಂಚಾಯಿತಿ ಸಿಇಓ ಗಜಾನನ ಬಾಲೆ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಶಾಲಾ ಆರಂಭದ ವೇಳೆ ಜಿಲ್ಲೆಯಾದ್ಯಂತ ಕಟ್ಟಡ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ 628 ಶಾಲಾ ಕಟ್ಟಡಗಳು ಅನ್​​ಫಿಟ್​​ ಎಂದು ವರದಿ ನೀಡಲಾಗಿತ್ತು. ಆದರೆ ಈ ಶಾಲೆಯ ಹೆಸರು ಆ ಲಿಸ್ಟ್​​ನಲ್ಲಿ ಇರಲಿಲ್ಲ. ಹೀಗಾಗಿ ಮೇಲ್ನೋಟಕ್ಕೆ ಎಂಜಿನಿಯರ್​​ ಶಾಲೆಯ ಕಟ್ಟಡವನ್ನು ಸರಿಯಾಗಿ ಪರಿಶೀಲನೆ ನಡೆಸದಿರೋದು ಸಾಬೀತಾಗಿದ್ದ ಕಾರಣ ಪಿಆರ್​ಇಡಿ ಇಂಜಿನಿಯರ್ ಗಳನ್ನು ಸಸ್ಪೆಂಡ್ ಮಾಡಲಾಗಿದೆ.

ಶಾಲಾ ಕಟ್ಟಡ ಸುರಕ್ಷತೆ ಬಗ್ಗೆ ಸಮರ್ಪಕ ಮಾಹಿತಿ ನೀಡುವಂತೆ ಹಾಗೂ ಹಾನಿಗೊಳಗಾಗಿದ್ದ ಕಟ್ಟಡಗಳನ್ನು ದುರಸ್ತಿ ಮಾಡುವಂತೆ ಈ ಹಿಂದೆಯೇ ಜಿಲ್ಲಾ ಪಂಚಾಯತ್ ಸಿಇಒ ಆದೇಶ ನೀಡಿದ್ದರು. ಆದರೆ ಈ ಶಾಲೆಯ ಬಗ್ಗೆ ಪಿಆರ್​ಇಡಿ ಅಧಿಕಾರಿಗಳು ಮಾಹಿತಿಯನ್ನೇ ನೀಡಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪಿಆರ್​ಇಡಿ ಇಂಜಿನಿಯರ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಸರ್ಕಾರಿ ವಾಹನಗಳಿಂದಲೇ ಸಂಚಾರಿ ನಿಯಮ ಉಲ್ಲಂಘನೆ: ಪೊಲೀಸ್​ ವಾಹನಗಳ ಮೇಲೆಯೇ 3,366 ಕೇಸ್ ದಾಖಲು

ಬೆಂಗಳೂರು: ಜನಸಾಮಾನ್ಯರು ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ತಕ್ಷಣ ಮೊಬೈಲ್ ಗೆ ಇ-ಚಲನ್ ಸಂದೇಶ ಬರುತ್ತದೆ. ಟ್ರಾಫಿಕ್ ಪೊಲೀಸರು ದಂಡ ವಸೂಲಿ ಮಾಡುತ್ತಾರೆ. ಆದರೆ ಸರ್ಕಾರಿ ವಾಹನಗಳು, ಅದರಲ್ಲಿಯೂ ಪೊಲೀಸ್ ವಾಹನಗಳೇ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ಮೂಲಕ ಬೇಲಿಯೇ ಎದ್ದು ಹೊಲ ಮೆಯ್ಡಂತಾಗಿದೆ.

ಕಾನೂನು ಸುವ್ಯವಸ್ಥೆ ಕಾಯಬೇಕಾದ ಸರ್ಕಾರಿ ಹಾಗೂ ಪೊಲೀಸ್ ವಾಹನಗಳೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುತ್ತಿದ್ದು, ಈ ಬಗ್ಗೆ ಗೃಹ ಇಲಾಖೆಯೇ ಅಧಿಕ್ರ‍ಿತ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಸರ್ಕಾಅರಿ ವಾಹನ ಹಾಗೂ ಪೊಲೀಸ್ ವಾಹನಗಳ ಈ ನಡೆಯನ್ನು ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ.

ಸಂಚಾರ ನಿಯಮಗಳ ಬಗ್ಗೆ ಜನರಿಗೆ ತಿಳುವಳಿಕೆ ಹೇಳಬೇಕಾದ ಪೊಲೀಸ್ ಇಲಾಖೆಯ ವಾಹನಗಳೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿವೆ. ಕಳೆದ ಮೂರೂವರೆ ವರ್ಷಗಳಲ್ಲಿ ಪೊಲೀಸ್ ಇಲಾಖೆಯ ವಾಹನಗಳ ವಿರುದ್ಧ ಬರೋಬ್ಬರಿ 3,366 ಪ್ರಕರಣಗಳು ದಾಖಲಾಗಿವೆ.

2023ರಲ್ಲಿ ಕೇವಲ 21 ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ ಈ ಸಂಖ್ಯೆ 1,494ಕ್ಕೆ ಏರಿಕೆಯಾಗಿತ್ತು. 2025ರಲ್ಲಿ 1,251 ಮತ್ತು 2026ರ ಜುಲೈ ಅಂತ್ಯದ ವೇಳೆಗೆ ಮತ್ತೆ 600 ಪ್ರಕರಣಗಳು ದಾಖಲಾಗಿವೆ.

ಇನ್ನು ಸರ್ಕಾರಿ ಕಚೇರಿಗಳ ವಾಹನಗಳು ಸಂಚಾರ ನಿಯಮಗಳನ್ನು ಗಾಳಿಗೆ ತೂರಿವೆ. ಕಳೆದ ಮೂರೂವರೆ ವರ್ಷಗಳಲ್ಲಿ ವಿವಿಧ ಸರ್ಕಾರಿ ಇಲಾಖೆಯ ವಾಹನಗಳ ಮೇಲೆ ಬರೋಬ್ಬರಿ 82,478 ಕೇಸ್‌ಗಳು ದಾಖಲಾಗಿವೆ. 2023ರಲ್ಲಿ 1,055 ಕೇಸ್‌ಗಳಿದ್ದರೆ, 2024ರಲ್ಲಿ ಅತಿ ಹೆಚ್ಚು ಅಂದರೆ 35,832 ಹಾಗೂ 2025ರಲ್ಲಿ ದಾಖಲೆಯ 38,282 ಪ್ರಕರಣಗಳು ದಾಖಲಾಗಿವೆ.

ಪ್ರಸಕ್ತ 2026ರ ಜುಲೈವರೆಗೆ 7,309 ಕೇಸ್‌ಗಳು ದಾಖಲಾಗಿವೆ. ಒಟ್ಟಾರೆಯಾಗಿ ಪೊಲೀಸ್ ಹಾಗೂ ಸರ್ಕಾರಿ ಇಲಾಖೆಗಳೆರಡೂ ಸೇರಿ ಬರೋಬ್ಬರಿ 85,844 ಬಾರಿ ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.

ಜನ ಸಾಮಾನ್ಯರ ವಾಹನ ಸವಾರರು ದಂಡ ಕಟ್ಟದಿದ್ದರೆ ವಾಹನ ತಡೆಯುವ ಅಥವಾ ಜಪ್ತಿ ಮಾಡುವ ವ್ಯವಸ್ಥೆ ಇದೆ. ಆದರೆ ಸರ್ಕಾರಿ ಮತ್ತು ಪೊಲೀಸ್ ವಾಹನಗಳಿಂದ ಯಾವುದೇ ದಂಡ ವಸೂಲಿ ಕ್ರಮ ವ್ಯವಸ್ಥಿತವಾಗಿ ಜಾರಿಗೆ ಬಂದಿಲ್ಲ. 85,000ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬರೋಬ್ಬರಿ 19.23 ಕೋಟಿ ರೂ ದಂಡ ಬಾಕಿಯಿದೆ.

2023: ವಿಧಿಸಲಾದ ದಂಡ 5,41,500 ರೂ, ವಸೂಲಾಗಿದ್ದು 1,19,000; ಬಾಕಿ ಉಳಿದದ್ದು 4,22,500 ರೂ.

2024: ಅತಿ ಹೆಚ್ಚು ಅಂದರೆ 17,48,60,700 ರೂ ದಂಡ ವಿಧಿಸಲಾಗಿದ್ದು, ವಸೂಲಾಗಿದ್ದು ಕೇವಲ 35,27,700 ರೂ ಬರೋಬ್ಬರಿ 17,13,33,000 ರೂ ಬಾಕಿ ಉಳಿದಿದೆ.

2025: 2,09,19,000 ರೂ ದಂಡದಲ್ಲಿ 6,61,250 ರೂ, ಮಾತ್ರ ಸಂಗ್ರಹವಾಗಿದ್ದು, 2,02,56,500 ರೂ. ಬಾಕಿಯಾಗಿದೆ.

2026 (ಜುಲೈವರೆಗೆ): 40,10,000 ರೂ ದಂಡದಲ್ಲಿ 4,64,750 ರೂ ಮಾತ್ರ ಜಮೆಯಾಗಿದ್ದು, 36,05,000 ರೂ ಬಾಕಿ ಇದೆ.

ಸರ್ಕಾರಿ ಹಾಗೂ ಪೊಲೀಸ್ ವಾಹನಗಳಿಂದ ಸರ್ಕಾರಕ್ಕೆ ಬರಬೇಕಾದ ದಂಡದ ಮೊತ್ತ ಬರೋಬ್ಬರಿ 19.23 ಕೋಟಿ ರೂ ಬಾಕಿ ಇದೆ ಎಂದು ಗೃಹ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular