ಬೆಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಪ್ರಮುಖ ದಾಖಲೆಗಳಿದ್ದ ಬ್ಯಾಗ್ ಅನ್ನು ಮರೆತು ಬಿಟ್ಟಿದ್ದ ಬ್ರಿಟಿಷ್ ಪ್ರಜೆಯೊಬ್ಬರಿಗೆ ಬೆಂಗಳೂರು ನಗರ ಪೊಲೀಸರು ನೆರವಾಗುವ ಮೂಲಕ ಸುದ್ದಿಯಾಗಿದ್ದಾರೆ. ಪೊಲೀಸರ ತ್ವರಿತ ಕ್ರಮದಿಂದಾಗಿ ಬ್ಯಾಗ್ ಪತ್ತೆಯಾಗಿದ್ದು, ಅದನ್ನು ಸುರಕ್ಷಿತವಾಗಿ ವಿದೇಶಿ ಪ್ರಜೆಗೆ ಹಿಂತಿರುಗಿಸಲಾಗಿದೆ. ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಘಟನೆಯ ವಿವರ
ಬೆಂಗಳೂರಿಗೆ ಭೇಟಿ ನೀಡಿದ್ದ ಯುಕೆ (UK) ಪ್ರಜೆಯೊಬ್ಬರು ಆಟೋದಲ್ಲಿ ಪ್ರಯಾಣಿಸುವಾಗ ತಮ್ಮ ವೈಯಕ್ತಿಕ ದಾಖಲೆಗಳು ಮತ್ತು ವಸ್ತುಗಳಿದ್ದ ಬ್ಯಾಗ್ ಅನ್ನು ಆಟೋದಲ್ಲೇ ಬಿಟ್ಟಿದ್ದರು. ಈ ಬಗ್ಗೆ ಎಚ್‌ಎಸ್‌ಆರ್ ಲೇಔಟ್ (HSR Layout) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ತನಿಖೆ ನಡೆಸಿ ಆಟೋ ರಿಕ್ಷಾವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
ಪೊಲೀಸ ರಟ್ವೀಟ್
ಈ ಯಶಸ್ವಿ ಕಾರ್ಯಾಚರಣೆಯ ಬಗ್ಗೆ ಆಗ್ನೇಯ ವಿಭಾಗದ ಡಿಸಿಪಿ (DCP South East) ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ:”ಯುಕೆ ದೇಶದ ಪ್ರಜೆ ಒಬ್ಬರು ಆಟೋ ರಿಕ್ಷಾದಲ್ಲಿ ತಮ್ಮ ಮಹತ್ವದ ದಾಖಲಾತಿಗಳಿದ್ದ ಬ್ಯಾಗ್ ಅನ್ನು ಕಳೆದುಕೊಂಡಿದ್ದು, ದೂರು ನೀಡಿದ ತಕ್ಷಣ ಕ್ರಮ ಕೈಗೊಂಡ @hsrlayoutps ರವರು ಪರಿಶೀಲನೆ ನಡೆಸಿ ಸಂಬಂಧಿಸಿದ ಆಟೋ ರಿಕ್ಷಾ ಪತ್ತೆ ಮಾಡಿ ಬ್ಯಾಗ್ ಅನ್ನು ದಾಖಲಾತಿಗಳ ಸಮೇತ ಪತ್ತೆ ಮಾಡಿ ವಿದೇಶಿ ನಾಗರೀಕರಿಗೆ ಹಿಂತಿರುಗಿಸಿರುತ್ತಾರೆ.”
ಜನರಿಂದ ಮೆಚ್ಚುಗೆಯ ಮಹಾಪೂರ
ಪೊಲೀಸರ ಈ ದಕ್ಷತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ.”ಅತ್ಯುತ್ತಮ ಕೆಲಸ ಸರ್. ಇದು ನಾಗರಿಕರ ಮತ್ತು ವಿದೇಶಿ ಅತಿಥಿಗಳ ವಿಶ್ವಾಸವನ್ನು ಹೆಚ್ಚಿಸಿದೆ,” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.”ಬೆಂಗಳೂರಿನ ನಿವಾಸಿಯಾಗಿ ನನಗೆ ನಮ್ಮ ಪೊಲೀಸ್ ಇಲಾಖೆಯ ಬಗ್ಗೆ ಹೆಮ್ಮೆಯಿದೆ. ಮೊಬೈಲ್ ಕಳೆದುಹೋದಾಗ ಅಥವಾ ಪಾಸ್‌ಪೋರ್ಟ್ ಪರಿಶೀಲನೆಯ ಸಂದರ್ಭದಲ್ಲೂ ಪೊಲೀಸರು ಬಹಳ ವಿನಯದಿಂದ ಮತ್ತು ಸಹಕಾರದಿಂದ ವರ್ತಿಸುತ್ತಾರೆ,” ಎಂದು ಮತ್ತೊಬ್ಬರು ಶ್ಲಾಘಿಸಿದ್ದಾರೆ.

