ಹಿಂದು ಧರ್ಮದಲ್ಲಿ ತುಳಸಿಗೆ ಮಹತ್ವದ ಸ್ಥಾನವಿದೆ. ಭಕ್ತರು ಭಯ-ಭಕ್ತಿಯಿಂದ ತುಳಸಿ ಪೂಜೆಯನ್ನು ಮಾಡ್ತಾರೆ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯ ಮುಂದೆ ಅಥವಾ ಹಿಂದೆ ತುಳಸಿ ಸಸಿ ಇದ್ದೇ ಇರ್ತಾ ಇತ್ತು. ದಿನನಿತ್ಯ ಅದಕ್ಕೆ ಪೂಜೆ ಮಾಡ್ತಾ ಇದ್ದರು. ಕಾರ್ತೀಕ ಮಾಸದಲ್ಲಿ ಸಂಜೆ ದೀಪ ಬೆಳಗುತ್ತಿದ್ದರು. ಕಾಲ ಬದಲಾಗಿದ್ದರೂ ಹಿಂದುಗಳ ಮನೆ ಮುಂದೆ ಕುಂಡದಲ್ಲಾದ್ರೂ ತುಳಸಿಯನ್ನು ನೋಡಬಹುದಾಗಿದೆ.
ಕಾರ್ತಿಕ ಮಾಸದಲ್ಲಿ ತುಳಸಿ ಮದುವೆಯನ್ನು ಅದ್ಧೂರಿಯಾಗಿ ಮಾಡಲಾಗುತ್ತದೆ. ನವೆಂಬರ್ 26 ರಂದು ನಾಡಿನೆಲ್ಲೆಡೆ ತುಳಸಿ ಪೂಜೆಯನ್ನು ಆಚರಿಸಲಾಗ್ತಿದೆ. ತುಳಸಿ ಹಾಗೂ ಶ್ರೀಕೃಷ್ಣನ ಮದುವೆ ಮಾಡಿಸುವ ಪದ್ಧತಿ ನಮ್ಮಲ್ಲಿ ರೂಢಿಯಲ್ಲಿದೆ.
ತುಳಸಿ ಮದುವೆಯ ದಿನ ಭಕ್ತರು ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಮನೆ ಮುಂದಿರುವ ತುಳಸಿ ಸ್ಥಳವನ್ನು ಸ್ವಚ್ಛಗೊಳಿಸುತ್ತಾರೆ. ಸಂಜೆ ಸಮಯದಲ್ಲಿ ತುಳಸಿ ಪೂಜೆಯನ್ನು ಮಾಡಲಾಗುತ್ತದೆ. ತುಳಸಿ ಮದುವೆಗೆ ಮಂಟಪ ಸಿದ್ಧಪಡಿಸಲಾಗುತ್ತದೆ. ತುಳಸಿ ಮುಂದೆ ರಂಗೋಲಿಯಿಟ್ಟು ಅಲಂಕಾರ ಮಾಡಲಾಗುತ್ತದೆ. ಚೆಂಡು ಹೂ, ಕಬ್ಬಿನ ಮಂಟಪ ಸಿದ್ಧಪಡಿಸಲಾಗುತ್ತದೆ. ಮಾವಿನ ಎಲೆ ಹಾಗೂ ಬಾಳೆ ಗಿಡ ಬಳಸಿಯೂ ಮಂಟಪ ರೆಡಿ ಮಾಡಲಾಗುತ್ತದೆ. ತುಳಸಿ ಸಸಿಯ ಬಳಿ ಕಾಡು ನೆಲ್ಲಿಕಾಯಿ ಇಟ್ಟು ಮದುವೆ ಮಾಡಲಾಗುತ್ತದೆ.
ತುಳಸಿ ಬಳಿ ವಿಷ್ಣುರೂಪವಾದ ಸಾಲಿಗ್ರಾಮವನ್ನಿಟ್ಟು ಪೂಜೆ ಮಾಡಿದ್ರೆ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಕೆಲವು ಕಡೆ ಈಗಲೂ ಸಂಪ್ರದಾಯದಂತೆ, ಮನೆಯಲ್ಲಿ ವ್ಯಕ್ತಿಯೊಬ್ಬರ ಮದುವೆ ನಡೆಯುತ್ತಿದೆ ಎನ್ನುವ ರೀತಿಯಲ್ಲಿ ತುಳಸಿ ಮದುವೆಯನ್ನು ಮಾಡುತ್ತಾರೆ. ತುಳಸಿ ದೇವಿ ಹಾಗೂ ಶ್ರೀಕೃಷ್ಣನ ಮೂರ್ತಿಯನ್ನಿಟ್ಟು ಪೂಜೆ ಮಾಡಲಾಗುತ್ತದೆ. ತುಳಸಿ ಮದುವೆ ಬಗ್ಗೆ ಪುರಾಣದಲ್ಲಿ ಭಿನ್ನ ಕಥೆಗಳಿವೆ. ವಿಷ್ಣುವನ್ನು ತುಳಸಿ ಮದುವೆಯಾದ್ಲು ಎಂದು ಒಂದು ನಂಬಿಕೆ ಇದ್ರೆ ಇನ್ನೊಂದರಲ್ಲಿ ಕೃಷ್ಣ ಮದುವೆಯಾದ ಎಂಬ ನಂಬಿಕೆ ಇದೆ.
ಅದೇನೇ ಇರಲಿ, ಹಿಂದೂ ಭಕ್ತರು ಭಯ, ಭಕ್ತಿಯಿಂದ ತಮ್ಮದೇ ರೀತಿಯಲ್ಲಿ ತುಳಸಿಯ ಪೂಜೆಯನ್ನು ಮಾಡ್ತಾ ಬಂದಿದ್ದಾರೆ. ಹೊಸ ಬಟ್ಟೆ ತೊಟ್ಟು ಸಡಗರದಿಂದ ಮದುವೆ ಮಾಡ್ತಾರೆ. ಸಿಹಿ ತಿಂಡಿಗಳನ್ನು ಮಾಡಿ ತುಳಸಿಗೆ ನೈವೇದ್ಯ ಮಾಡುತ್ತಾರೆ. ಮದುವೆ ಮಂತ್ರಗಳನ್ನು ಹೇಳಿ, ಮಾಲೆ ಹಾಕಿ ಮದುವೆ ಮಾಡುವ ಪದ್ಧತಿ ರೂಢಿಯಲ್ಲಿದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003