ದೀಪಗಳ ಹಬ್ಬ ದೀಪಾವಳಿಯಲ್ಲಿ ದೀಪಗಳನ್ನು ಬೆಳಗಿಸಿದ್ರೆ ಮನೆ, ಮನ ಬೆಳಗುತ್ತದೆ ಅನ್ನೋದು ಎಲ್ಲರ ನಂಬಿಕೆ. ಮನೆಯ ಮೂಲೆಯಲ್ಲಿ ದೀಪಗಳನ್ನು ಹಚ್ಚುವುದು ಸಾಮಾನ್ಯ.
ಈ ದೀಪಗಳಿಗೂ ಅದರದ್ದೇ ಆದ ಮಹತ್ವವಿದೆ. ದೀಪದಲ್ಲಿರುವ ಎಣ್ಣೆ ಮಾನವರ ದುರಾಸೆ, ದ್ವೇಷ, ಅಸೂಯೆ, ಕಾಮದ ಸಂಕೇತ. ದೀಪದಲ್ಲಿರುವ ಬತ್ತಿ ಆತ್ಮವನ್ನು ಪ್ರತಿನಿಧಿಸುತ್ತದೆ, ಕೆಟ್ಟದ್ದನ್ನು ಸುಟ್ಟು ಹಾಕಿ, ಸರ್ವೋಚ್ಛ ಶಕ್ತಿಯನ್ನು ಒಂದುಗೂಡಿಸಲು, ಮೋಕ್ಷವನ್ನು ಪಡೆಯಲು ನಾವು ದೀಪ ಬೆಳಗುತ್ತೇವೆ.
ದೀಪ ಜ್ಞಾನದ ಸಂಕೇತ, ದೀಪ ಬೆಳಗುವುದು ಎಂದರೆ ಅಂಧಕಾರದಿಂದ ಬೆಳಕಿನೆಡೆಗೆ ನಡೆದಂತೆ. ನಿರ್ದಿಷ್ಟ ಸ್ಥಳಗಳಲ್ಲಿ ದೀಪ ಬೆಳಗಿದ್ರೆ ಸಂಪತ್ತು ನಿಮ್ಮನ್ನು ಅರಸಿ ಬರುತ್ತದೆ. ಲಕ್ಷ್ಮಿ ನಿಮ್ಮ ದುರದೃಷ್ಟವನ್ನೆಲ್ಲ ದೂರ ಮಾಡುತ್ತಾಳೆ. ಹಾಗಾದ್ರೆ ಈ ಬಾರಿ ದೀಪಾವಳಿಯಲ್ಲಿ ಎಲ್ಲೆಲ್ಲಿ ದೀಪಗಳನ್ನು ಬೆಳಗಿದರೆ ಶ್ರೇಷ್ಠ ಅನ್ನೋದನ್ನು ನೋಡೋಣ.
ರಸ್ತೆಗಳು ಕೂಡುವ ಚೌಕಗಳಲ್ಲಿ : ದುರಾದೃಷ್ಟವನ್ನೆಲ್ಲ ಓಡಿಸಲು ರಸ್ತೆಗಳ ಛೇದಕದಲ್ಲಿ ಒಂದು ದೀಪವನ್ನು ಬೆಳಗಿಸಿ.
ಮುಖ್ವ ದ್ವಾರದಲ್ಲಿ : ದೀಪಾವಳಿಯಲ್ಲಿ ನಿಮ್ಮ ಮನೆಯ ಮುಖ್ಯದ್ವಾರದ ಎದುರು ಎರಡು ದೀಪಗಳನ್ನು ಹಚ್ಚುವುದು ಅತ್ಯಂತ ಶ್ರೇಷ್ಠ.
ಅಶ್ವತ್ಥ ಮರದ ಕೆಳಗೆ : ದೀಪಾವಳಿಯಂದು ರಾತ್ರಿ ಅಶ್ವತ್ಧ ಮರದ ಅಡಿಯಲ್ಲಿ ಒಂದು ದೀಪ ಬೆಳಗಿಸಿ, ದೀಪ ಹಚ್ಚಿದ ಮೇಲೆ ಹಿಂತಿರುಗಿ ನೋಡದೆ ಬನ್ನಿ.
ಮನೆಯ ಒಳಕ್ಕೆ : ನಿಮ್ಮ ಮನೆಯೊಳಕ್ಕೆ ಪ್ರತಿದಿನ ಲಕ್ಷ್ಮಿಯನ್ನು ಪೂಜಿಸುವ ಸ್ಥಳದಲ್ಲಿ ತುಪ್ಪದ ದೀಪ ಹಚ್ಚಿಡಿ. ಆ ದೀಪ ರಾತ್ರಿಯಿಡೀ ಬೆಳಗಬೇಕು.
ದೇವಾಲಯದ ಸಮೀಪ : ದೇವರ ಆಶೀರ್ವಾದ ದೊರೆಯಬೇಕೆಂದರೆ ದೇವಸ್ಥಾನದ ಸಮೀಪ ಒಂದು ದೀಪ ಬೆಳಗಿಸಿ.
ಬಿಲ್ವಪತ್ರೆಯ ಮರದಡಿ : ಮುಸ್ಸಂಜೆ ಹೊತ್ತಿನಲ್ಲಿ ಬಿಲ್ವಪತ್ರೆ ಮರದಡಿ ದೀಪ ಹಚ್ಚಿದಲ್ಲಿ ನೀವು ಶಿವನ ಕೃಪೆಗೆ ಪಾತ್ರರಾಗುತ್ತೀರಿ.
ನಿಮ್ಮ ವರಾಂಡಾದಲ್ಲಿ : ನಕಾರಾತ್ಮಕತೆಯನ್ನು ಓಡಿಸಲು ಪ್ರತಿದಿನ ನಿಮ್ಮ ಮನೆಯ ವರಾಂಡಾದಲ್ಲಿ ದೀಪವನ್ನು ಬೆಳಗಿಸಿ.