ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಕೆಜಿಎಫ್ ಸರಣಿಯ ಮೂಲಕ ಜಾಗತಿಕ ಮಟ್ಟದಲ್ಲಿ ಭರ್ಜರಿ ಯಶಸ್ಸು ದಾಖಲಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಪ್ಯಾನ್ ಇಂಡಿಯಾ ಚಿತ್ರ ಟಾಕ್ಸಿಕ್ (Toxic) ಸದ್ಯ ಇಡೀ ದೇಶಾದ್ಯಂತ ಅತ್ಯಂತ ನಿರೀಕ್ಷೆ ಮೂಡಿಸಿರುವ ಸಿನಿಮಾವಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಆಗಸ್ಟ್ 26ರಂದು ಬೆಳ್ಳಿಪರದೆಗೆ ಅಪ್ಪಳಿಸಲು ಸಜ್ಜಾಗುತ್ತಿದೆ. ಆದರೆ, ಚಿತ್ರ ಬಿಡುಗಡೆಗೂ ಮುನ್ನವೇ ಸಿನಿಮಾದ ಬಾಕ್ಸ್ ಆಫೀಸ್ ಭವಿಷ್ಯದ ಕುರಿತು ಮಾಜಿ ಬಿಗ್ ಬಾಸ್ ಸ್ಪರ್ಧಿ, ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ನೀಡಿರುವ ವಿಶ್ಲೇಷಣೆ ಈಗ ಸ್ಯಾಂಡಲ್‌ವುಡ್ ಅಂಗಳದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಗುರೂಜಿ ಅವರ ಈ ಹೇಳಿಕೆ ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
“ಟಾಕ್ಸಿಕ್ ಆವರೇಜ್ ಆಗಿ ಓಡಬಹುದು”: ಗುರೂಜಿ ಪ್ರೆಡಿಕ್ಷನ್
ಇತ್ತೀಚೆಗೆ ‘ಕಿರಿಕ್ ಕೀರ್ತಿ’ ಅವರ ಯೂಟ್ಯೂಬ್ ಸಂದರ್ಶನದಲ್ಲಿ ಭಾಗವಹಿಸಿದ್ದ ಆರ್ಯವರ್ಧನ್ ಗುರೂಜಿ ಅವರಿಗೆ ‘ಟಾಕ್ಸಿಕ್’ ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆಯ ಮುನ್ಸೂಚನೆ ಬಗ್ಗೆ ಪ್ರಶ್ನೆ ಎದುರಾಗಿತ್ತು. ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಗುರೂಜಿ, “ಟಾಕ್ಸಿಕ್ ಸಿನಿಮಾ ಆವರೇಜ್ ಆಗಿ ಓಡಬಹುದು. ಇದರಿಂದ ನಿರ್ಮಾಪಕರಿಗೆ ನಷ್ಟವೂ ಆಗಲ್ಲ, ಅತಿ ದೊಡ್ಡ ಲಾಭವೂ ಆಗಲ್ಲ. ಬರೋರಿಗೆಲ್ಲಾ ಟೈಮ್ ಬೇಕಿಲ್ಲ, ಅವರು ಬಂದು ಹೋಗ್ತಾ ಇರ್ತಾರೆ. ಆದರೆ ಯಶ್ ಅವರು ಸಿನಿಮಾ ತರೋದಕ್ಕೆ ತುಂಬಾ ಸಮಯ ತಗೊಳ್ತಿದ್ದಾರೆ” ಎಂದು ಭವಿಷ್ಯ ನುಡಿದಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ಇಷ್ಟೊತ್ತಿಗೆ ಟಾಕ್ಸಿಕ್ ಸಿನಿಮಾ ಬರಬೇಕಾಗಿತ್ತು. ಈಗ ಜನರಲ್ಲಿ ಆ ಸಿನಿಮಾದ ಕ್ರೇಜ್ ಕೊಂಚ ಕಮ್ಮಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಮಾರ್ಕೆಟಿಂಗ್‌ನಲ್ಲೇ ಗಿಮಿಕ್ ನಡೆಯುತ್ತಿದೆ. ಯೂಟ್ಯೂಬ್, ಇನ್‌ಸ್ಟಾಗ್ರಾಮ್‌ಗಳನ್ನ ಹಣ ಕೊಟ್ಟು ಕೊಂಡುಕೊಳ್ಳುತ್ತಾರೆ. ಎಲ್ಲರೂ ಸೂಪರ್ ಸಿನಿಮಾ ಅಂತಿರುತ್ತಾರೆ, ಆದರೆ ಥಿಯೇಟರ್‌ಗೆ ಹೋದರೆ ತಲೆನೋವು ಬರುತ್ತೆ. ಈಗ ಎಲ್ಲವೂ ಕಮರ್ಷಿಯಲ್ ಆಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
A post shared by aryavardan crystal numerologist (@aryavardan666)
ಇಂದಿನ ಸಿನಿಮಾ ಮೇಕಿಂಗ್ ಟ್ರೆಂಡ್ ಹಾಗೂ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಎರಡನ್ನೂ ತಳುಕು ಹಾಕಿದ ಗುರೂಜಿ, “ನಮ್ಮಂತವರಿಗೆಲ್ಲಾ ಥಿಯೇಟರ್‌ಗೆ ಹೋಗಲು ಟೈಮ್ ಇರಲ್ಲ. ಸಿನಿಮಾ ಮೂರು ಗಂಟೆ ಇರುತ್ತೆ, ಇನ್ನು ಬೆಂಗಳೂರು ಟ್ರಾಫಿಕ್‌ನಲ್ಲಿ ಹೋಗಿ ಬರಲು 2 ಗಂಟೆ ಬೇಕು. ಒಟ್ಟು ಐದು ಗಂಟೆ ಸಮಯ ವ್ಯರ್ಥವಾಗುತ್ತದೆ. ಅಷ್ಟು ಸಮಯ ಕೊಡಬೇಕಾದರೆ ಸಿನಿಮಾದಲ್ಲಿ ಅಂತಹ ಗಟ್ಟಿತನ ಇರಬೇಕು. ನಿರ್ದೇಶಕ ರಾಜಮೌಳಿ ಅವರ ಸಿನಿಮಾಗಳು ಎಲ್ಲಾದರೂ ಫೇಲ್ಯೂರ್ ಆದರೂ, ಅದರಲ್ಲಿ ಒಂದು ಸಾಂಗ್ ಅಥವಾ ಮೇಕಿಂಗ್ ಹೈಲೈಟ್ ಆಗಿರುತ್ತೆ. ಆದರೆ ಇಂದಿನ ಸಿನಿಮಾಗಳಲ್ಲಿ ಜ್ಞಾನ ಇಂಪ್ರೂವ್ ಮಾಡುವಂತಹ ಕಥೆಗಳೇ ಇರಲ್ಲ. ಕೆಜಿಎಫ್ ಕೊನೆಯ ಸೀನ್‌ನಲ್ಲಿ ಅಷ್ಟೊಂದು ಗನ್ ಶೂಟ್ ಮಾಡಿದ್ದಕ್ಕೆ ಒಂದು ಅರ್ಥವಿತ್ತು, ಕಥೆಗೆ ಅದರ ಅವಶ್ಯಕತೆ ಇತ್ತು. ಆದರೆ ಈಗಿನ ಸಿನಿಮಾಗಳಲ್ಲಿ ಎತ್ತಿನಗಾಡಿಯಲ್ಲೂ ಎಕೆ-47 ಗನ್ ತಗೊಂಡು ಬಂದು ಶೂಟ್ ಮಾಡ್ತಾರೆ! ಎತ್ತಿನಗಾಡಿಗೂ ಎಕೆ-47ಗೂ ಏನು ಸಂಬಂಧ?” ಎಂದು ಇಂದಿನ ಕಮರ್ಷಿಯಲ್ ಸಿನಿಮಾಗಳನ್ನು ಲೇವಡಿ ಮಾಡಿದ್ದಾರೆ.
ಆಗಾಗ್ಗೆ ತಮ್ಮ ವಿವಾದಾತ್ಮಕ ಹಾಗೂ ನೇರ ಹೇಳಿಕೆಗಳಿಂದಲೇ ಸುದ್ದಿಯಾಗುವ ಆರ್ಯವರ್ಧನ್ ಗುರೂಜಿ ಮಾತುಗಳು ಇದೀಗ ಯಶ್ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಗುರೂಜಿ ವಿರುದ್ಧ ವ್ಯಾಪಕ ಟ್ರೋಲ್ ಆರಂಭವಾಗಿದ್ದು, ಯಶ್ ಫ್ಯಾನ್ಸ್ ಖಡಕ್ ತಿರುಗೇಟು ನೀಡುತ್ತಿದ್ದಾರೆ.
“ಬೇರೆಯವರ ಸಿನಿಮಾ ಭವಿಷ್ಯ ಪ್ರೆಡಿಕ್ಟ್ ಮಾಡುವ ಗುರೂಜಿ ಅವರೇ, ನಿಮ್ಮ ಜಾತಕ ನಿಮಗೆ ಸರಿಯಾಗಿ ಗೊತ್ತಿದ್ದಿದ್ದರೆ ಬಿಗ್ ಬಾಸ್ ಮನೆಯಿಂದ ಅಷ್ಟೊಂದು ಬೇಗ ಯಾಕೆ ಹೊರಗೆ ಬರ್ತಿದ್ರಿ? ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆದ್ಮೇಲೆ ಬಾಕ್ಸ್ ಆಫೀಸ್ ಧೂಳೀಪಟವಾಗೋದನ್ನ ಕಣ್ಣಾರೆ ನೋಡಿ ನಮ್ಮ ಮುಂದೆ ಬನ್ನಿ” ಎಂದು ಅಭಿಮಾನಿಗಳು ಸವಾಲು ಹಾಕುತ್ತಿದ್ದಾರೆ.
ಭಾರಿ ತಾರಾಗಣದ ‘ಟಾಕ್ಸಿಕ್’
ಒಂದೆಡೆ ವಿವಾದಗಳು ಸೃಷ್ಟಿಯಾಗುತ್ತಿದ್ದರೂ ‘ಟಾಕ್ಸಿಕ್’ ಚಿತ್ರದ ಮೇಲಿರುವ ಹೈಪ್ ಮಾತ್ರ ಕಮ್ಮಿಯಾಗಿಲ್ಲ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ದಕ್ಷಿಣದ ಲೇಡಿ ಸೂಪರ್‌ಸ್ಟಾರ್ ನಯನತಾರಾ, ಕನ್ನಡದ ಹುಡುಗಿ ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಸೇರಿದಂತೆ ದೊಡ್ಡ ತಾರಾಬಳಗವೇ ಪವರ್‌ಫುಲ್ ಪಾತ್ರಗಳಲ್ಲಿ ನಟಿಸುತ್ತಿದೆ. ಚಿತ್ರಮಂದಿರಗಳಲ್ಲಿ ಯಶ್ ಅವರ ಈ ಹೊಸ ಅವತಾರ ಯಾವ ಮಟ್ಟದ ದಾಖಲೆ ಬರೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.

