ದಕ್ಷಿಣ ಭಾರತದ ಚಿತ್ರರಂಗದಿಂದ ತಮ್ಮ ಅಭಿನಯದ ಪಯಣ ಆರಂಭಿಸಿ, ಇಂದು ಇಡೀ ಭಾರತೀಯ ಚಿತ್ರರಂಗದಲ್ಲೇ ಪ್ರಸಿದ್ಧ ಪಾನ್ ಇಂಡಿಯಾ ತಾರೆಯಾಗಿ ಹೊರಹೊಮ್ಮಿರುವ ನಟಿ ರಶ್ಮಿಕಾ ಮಂದಣ್ಣ, ತಮ್ಮ ವೃತ್ತಿಜೀವನದ ಯಶಸ್ಸಿನ ಹಿಂದಿರುವ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಸಾಂಪ್ರದಾಯಿಕ ಚೌಕಟ್ಟುಗಳಿಗೆ ಬಂಧಿಯಾಗದೆ, ತಮ್ಮ ಸ್ವಂತ ನಿರ್ಧಾರ ಮತ್ತು ಆತ್ಮವಿಶ್ವಾಸವನ್ನು ನಂಬಿ ಮುನ್ನಡೆದಿದ್ದೇ ತಮ್ಮ ಸಾಧನೆಗೆ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ. ಪ್ರಸಿದ್ಧ ಪಾದರಕ್ಷೆ ಬ್ರ್ಯಾಂಡ್ ‘ಕ್ರಾಕ್ಸ್’ ಸಂಸ್ಥೆಯ ಹೊಸ ಮಳೆಗಾಲದ ಪ್ರಚಾರ ಕಾರ್ಯಕ್ರಮದ ಚಿತ್ರೀಕರಣದ ವೇಳೆ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ಸಿನಿಮಾ ಪಯಣದ ಬಗ್ಗೆ ಮಾತನಾಡಿದ ರಶ್ಮಿಕಾ, ಯಾವುದೇ ನಿರ್ದಿಷ್ಟ ಮಾದರಿಗೆ ಹೊಂದಿಕೊಳ್ಳದೆ ಹೊಸ ಚಿತ್ರರಂಗಕ್ಕೆ ಕಾಲಿಟ್ಟ ಸಮಯ ತಮಗೆ ಅತ್ಯಂತ ವಿಶೇಷವಾಗಿತ್ತು ಎಂದಿದ್ದಾರೆ. ಆ ಸಮಯದಲ್ಲಿ ಎಲ್ಲರೂ ನಿಖರವಾದ ಯೋಜನೆಗಳೊಂದಿಗೆ ಕೆಲಸ ಮಾಡುತ್ತಿದ್ದರೆ, ತಾವು ಮಾತ್ರ ತಮ್ಮ ಮನಸ್ಸಿನ ಮಾತನ್ನು ಕೇಳಿ ಹೆಜ್ಜೆ ಇಡುತ್ತಿದ್ದರು. ಆರಂಭದಲ್ಲಿ ಇದು ಕೊಂಚ ಭಯ ಮೂಡಿಸಿದರೂ, ಹಿಂತಿರುಗಿ ನೋಡಿದಾಗ ಅದೇ ತಮ್ಮ ದೊಡ್ಡ ಶಕ್ತಿಯಾಗಿ ಬದಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿಯೊಬ್ಬರಲ್ಲೂ ಇರುವ ವಿಭಿನ್ನತೆಯೇ ಅವರ ನಿಜವಾದ ಶಕ್ತಿ ಎಂಬುದನ್ನು ಅವರು ಬಲವಾಗಿ ನಂಬುತ್ತಾರೆ.
ಚಿತ್ರೀಕರಣದ ಸ್ಥಳದಲ್ಲಿದ್ದ ವಾತಾವರಣದ ಬಗ್ಗೆ ಹರ್ಷ ವ್ಯಕ್ತಪಡಿಸಿದ ನಟಿ, ಇಡೀ ತಂಡವು ಅತ್ಯಂತ ಉತ್ಸಾಹದಿಂದ ಕೆಲಸ ಮಾಡಿದೆ ಎಂದಿದ್ದಾರೆ. ಪ್ರತಿಯೊಬ್ಬರೂ ತಮ್ಮ ಸೃಜನಶೀಲತೆಯನ್ನು ತೊಡಗಿಸಿಕೊಂಡು ಕೆಲಸ ಮಾಡಿದಾಗ ಅದರ ಫಲಿತಾಂಶ ಅತ್ಯುತ್ತಮವಾಗಿ ಮೂಡಿಬರುತ್ತದೆ ಎಂಬುದಕ್ಕೆ ಈ ಚಿತ್ರೀಕರಣವೇ ಸಾಕ್ಷಿ ಎಂದು ತಿಳಿಸಿದ್ದಾರೆ.
ಇನ್ನು ತಮ್ಮ ದಿನನಿತ್ಯದ ಫ್ಯಾಷನ್ ಆಯ್ಕೆಗಳ ಬಗ್ಗೆ ಮಾತನಾಡುತ್ತಾ, ತಮಗೆ ಅನುಕೂಲಕರ ಹಾಗೂ ಆರಾಮದಾಯಕ ಉಡುಪು-ತೊಡುಪುಗಳೇ ಮೊದಲ ಆದ್ಯತೆ ಎಂದಿದ್ದಾರೆ. ವಿಶೇಷವಾಗಿ ಮಳೆಗಾಲದ ವಾತಾವರಣದಲ್ಲಿ ಛತ್ರಿ ಹಾಗೂ ಕ್ರಾಕ್ಸ್ ಪಾದರಕ್ಷೆಗಳಿಲ್ಲದೆ ತಾವು ಮನೆಯಿಂದ ಹೊರಗೆ ಹೆಜ್ಜೆ ಇಡುವುದಿಲ್ಲ ಎಂದು ರಶ್ಮಿಕಾ ತಿಳಿಸಿದ್ದಾರೆ. ಯಾರೋ ರೂಪಿಸಿದ ಚೌಕಟ್ಟಿಗೆ ಹೊಂದಿಕೊಳ್ಳಲು ಯತ್ನಿಸದೆ, ತಮ್ಮ ಸಹಜತೆಯನ್ನು ಉಳಿಸಿಕೊಂಡು ಬದುಕುವುದು ಅತ್ಯಂತ ಮುಖ್ಯ ಎಂಬ ಸಂದೇಶವನ್ನು ಅವರು ಈ ವೇಳೆ ನೀಡಿದ್ದಾರೆ.

