ಬೆಂಗಳೂರು:-ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲೀಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶ್ರೀ ರವಿಶಂಕರ್ ಗುರೂಜಿ ನೇತೃತ್ವದ ‘ಆರ್ಟ್ ಆಫ್ ಲಿವಿಂಗ್’ ಸಂಸ್ಥೆ ಮತ್ತು ಅದರ ಅಂಗಸಂಸ್ಥೆಗಳು ಸರ್ಕಾರಿ ಗೋಮಾಳ, ಕೆರೆ, ರಾಜಕಾಲುವೆ ಹಾಗೂ ದಲಿತರಿಗೆ ಸೇರಿದ ಜಮೀನುಗಳನ್ನು ಒತ್ತುವರಿ ಮಾಡಿವೆ ಎಂಬ ಗಂಭೀರ ಆರೋಪಗಳ ಕುರಿತು ವಿಶೇಷ ತನಿಖಾ ತಂಡ ( SIT)ರಚಿಸಿ ಕರ್ನಾಟಕ ಸರ್ಕಾರವು ಅಧಿಕೃತ ಆದೇಶ ಹೊರಡಿಸಿದೆ.
ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ಒಟ್ಟು 12 ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ.
ಮಂಗಳವಾರ ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ನೀಡಿರುವ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು, ಸಂಸ್ಥೆಯ ಮೇಲೆ ಗಂಭೀರ ಸ್ವರೂಪದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿದ್ದು, ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆಯಾದ ಬಳಿಕ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.
ಪ್ರಮುಖ ಆರೋಪಗಳು ಮತ್ತು ಹಿನ್ನೆಲೆ
ಪ್ರಮುಖ ಆರೋಪಗಳ ವಿವರ
ಸರ್ಕಾರಿ ಗೋಮಾಳ ಒತ್ತುವರಿ: ನ್ಯಾಯಾಲಯದ ನಿರ್ದೇಶನದಂತೆ ಅಕ್ಟೋಬರ್ 2025ರಲ್ಲಿ ಸಹಾಯಕ ಭೂದಾಖಲೆಗಳ ನಿರ್ದೇಶಕರು (ADLR) ನಡೆಸಿದ ಸಮೀಕ್ಷೆಯಲ್ಲಿ, ಕಗ್ಗಲೀಪುರ, ಬಿ.ಎಂ. ಕಾವಲ್, ಅಗರಾ ಮತ್ತು ಉತ್ತರಿ ಗ್ರಾಮಗಳಲ್ಲಿ ಆರ್ಟ್ ಆಫ್ ಲಿವಿಂಗ್ ಟ್ರಸ್ಟಿಗಳು ಒಟ್ಟು 290 ಎಕರೆಗೂ ಹೆಚ್ಚು ಸರ್ಕಾರಿ ಗೋಮಾಳ ಜಮೀನನ್ನು ವ್ಯವಸ್ಥಿತವಾಗಿ ಒತ್ತುವರಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಗುತ್ತಿಗೆ ಅವಧಿ ಮುಕ್ತಾಯಗೊಂಡರೂ ಬಳಕೆ: ಕಗ್ಗಲೀಪುರದ ಸರ್ವೆ ನಂ. 46ರಲ್ಲಿನ 41 ಎಕರೆ ಜಮೀನನ್ನು 1985ರಲ್ಲಿ ಅತ್ಯಂತ ಕಡಿಮೆ ದರದಲ್ಲಿ ಗುತ್ತಿಗೆಗೆ ನೀಡಲಾಗಿತ್ತು. 2015ರಲ್ಲಿಯೇ ಈ ಗುತ್ತಿಗೆಯ ಅವಧಿ ಮುಕ್ತಾಯಗೊಂಡಿದ್ದರೂ, ಯಾವುದೇ ನವೀಕರಣವಿಲ್ಲದೆ ಸಂಸ್ಥೆಯು ಈ ಬೆಲೆಬಾಳುವ ಆಸ್ತಿಯನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪವಿದೆ.
ರಾಜಕಾಲುವೆ ಹಾಗೂ ಕೆರೆ ಒತ್ತುವರಿ: ರಿಟ್ ಅರ್ಜಿ ಸಂಖ್ಯೆ 15264/2023ರನ್ವಯ, ಕಗ್ಗಲೀಪುರ ಗ್ರಾಮದ ಸರ್ವೆ ನಂಬರ್‌ಗಳಾದ 160, 164/1, 164/2, 150 ಮತ್ತು 137ರಲ್ಲಿ ರಾಜಕಾಲುವೆ ಹಾಗೂ ಸಾರ್ವಜನಿಕ ಜಮೀನುಗಳನ್ನು ಒತ್ತುವರಿ ಮಾಡಿ ಅಪಾರ್ಟ್‌ಮೆಂಟ್‌ಗಳು ಮತ್ತು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸರ್ವೆ ನಂ. 150ರಲ್ಲಿ ‘ಕೆರೆ’ ಎಂದು ನಮೂದಾಗಿರುವ ಬಹುಪಾಲು ಜಾಗ, ಹಳ್ಳಗಳು ಮತ್ತು ಬಂಡೆ ಖರಾಬು ಜಮೀನುಗಳು ಒತ್ತುವರಿಯಾಗಿರುವುದು ಬೆಳಕಿಗೆ ಬಂದಿದೆ.
ದಲಿತರ ಜಮೀನು ಅಕ್ರಮ ಸ್ವಾಧೀನ ಆರೋಪ
ದಲಿತರ ಜಮೀನು ಅಕ್ರಮ ಸ್ವಾಧೀನ ಆರೋಪ:
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವಿಸ್ತರಣೆಗಾಗಿ ಬಡ ದಲಿತ ರೈತರಿಗೆ ಸೇರಿದ ಸುಮಾರು 150 ಎಕರೆ ಜಮೀನನ್ನು ಕಾನೂನುಬಹಿರವಾಗಿ ಅಥವಾ ಒತ್ತಡ ಹೇರಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂಬ ಗಂಭೀರ ದೂರುಗಳು ದಲಿತ ಪರ ಸಂಘಟನೆಗಳಿಂದ ವ್ಯಕ್ತವಾಗಿತ್ತು.
ಉದಪಾಳ್ಯ ಕೆರೆ ಮತ್ತು ರಾಜಕಾಲುವೆ ಒತ್ತುವರಿ ಹಾಗೂ ಸರ್ಕಾರಿ ಜಮೀನು ಅಕ್ರಮ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಹಾಗೂ ಬೆಂಗಳೂರು ಮಹಾನಗರ ಕಾರ್ಯಪಡೆ (BMTF) ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಕಲಂ 192 ‘ಎ’ ಅಡಿ ಎಫ್‌ಐಆರ್ ದಾಖಲಾಗಿತ್ತು.
ಎಸ್‌ಐಟಿಯ ಜವಾಬ್ದಾರಿಗಳು ಮತ್ತು ಕಾಲಮಿತಿ
ಎಸ್‌ಐಟಿ (SIT) ಜವಾಬ್ದಾರಿಗಳು
ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 195 ಮತ್ತು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ, 2011ರ ಕಲಂ 8ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
ದಾಖಲೆಗಳ ಪರಿಶೀಲನೆ:
ಸರ್ಕಾರ, ಎನ್‌ಜಿಒ ಮತ್ತು ಪ್ರತಿವಾದಿಗಳ ದಾಖಲೆಗಳು, ಮಂಜೂರಾತಿ ಪತ್ರಗಳು ಹಾಗೂ ದಾನಪತ್ರಗಳ ಕೂಲಂಕಷ ಪರಿಶೀಲನೆ ನಡೆಸುವುದು. ದಾಖಲೆಗಳಲ್ಲಿನ ನಕಲಿ ಅಂಶಗಳನ್ನು ಪತ್ತೆ ಹಚ್ಚಿ ಮಂಜೂರಾತಿ ಷರತ್ತುಗಳ ಉಲ್ಲಂಘನೆಯನ್ನು ಗುರುತಿಸುವುದು.
ಉಪಗ್ರಹ (Satellite) ದತ್ತಾಂಶಗಳನ್ನು ಪರಿಶೀಲಿಸಿ ಪರಿಸರಕ್ಕಾದ ಹಾನಿಯನ್ನು ಅಂದಾಜು ಮಾಡುವುದು. (ಕಾವಲ್ ಪ್ರದೇಶಗಳನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಸೂಕ್ಷ್ಮ ಪರಿಸರ ವಲಯವೆಂದು ಪರಿಗಣಿಸಿದೆ).
ಸಾರ್ವಜನಿಕ ರಸ್ತೆಗಳು, ಜಲಮೂಲಗಳು, ಗುಡ್ಡಗಳು ಮತ್ತು ಬಂಡೆ ಖರಾಬು ಜಮೀನುಗಳ ನೈಜ ಗಡಿಗಳನ್ನು ಮರುಸ್ಥಾಪಿಸುವುದು.
ಕಾಲಮಿತಿ: ಎಲ್ಲಾ ತನಿಖಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಒತ್ತುವರಿಯ ಸತ್ಯಾಸತ್ಯತೆಯ ಕುರಿತು ಗರಿಷ್ಠ ಮೂರು ತಿಂಗಳ ಒಳಗಾಗಿ ಸರ್ಕಾರಕ್ಕೆ ಅಂತಿಮ ತನಿಖಾ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.
ಉನ್ನತ ಮಟ್ಟದ ಎಸ್‌ಐಟಿ ತಂಡದ ಸದಸ್ಯರು
ಉನ್ನತ ಮಟ್ಟದ ಎಸ್‌ಐಟಿ (SIT) ತಂಡದ ವಿವರ
ಅಮ್ಲನ್ ಆದಿತ್ಯ ಬಿಸ್ವಾಸ್, ಐ.ಎ.ಎಸ್. – ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ (ಅಧ್ಯಕ್ಷರು)
ಇಸ್ಲಾವುದ್ದೀನ್ ಜೆ. ಗದ್ಯಾಲ್, ಕೆ.ಎ.ಎಸ್. – ಹೆಚ್ಚುವರಿ ಪ್ರಾದೇಶಿಕ ಆಯುಕ್ತರು (ಸದಸ್ಯರು)
ಜಯಮಾಧವ್, ಕೆ.ಎ.ಎಸ್. – ವಿಶೇಷ ಜಿಲ್ಲಾಧಿಕಾರಿ-1, ಬೆಂಗಳೂರು ನಗರ ಜಿಲ್ಲೆ (ಸದಸ್ಯರು)
ನಿಸಾರ್ ಅಹಮದ್ – ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರು (ಸದಸ್ಯರು)
ನೇಗಿನಾಳ್ – ನಿವೃತ್ತ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸಲಹೆಗಾರರು, ಕಂದಾಯ ಇಲಾಖೆ (ಸದಸ್ಯರು)
ಗಿರೀಶ್ ನಂದನ್ – ಸಹಾಯಕ ಆಯುಕ್ತರು (ಆಡಳಿತ), ಜಿ.ಬಿ.ಎ, ಬೆಂಗಳೂರು (ಸದಸ್ಯರು)
ವಿಶ್ವನಾಥ್ – ಉಪ ವಿಭಾಗಾಧಿಕಾರಿಗಳು, ಬೆಂಗಳೂರು ದಕ್ಷಿಣ ಉಪ ವಿಭಾಗ (ಸದಸ್ಯರು)
ಕಲೀಮುಲ್ಲಾ – ತಹಶೀಲ್ದಾರ್, ಯಲಹಂಕ ತಾಲ್ಲೂಕು (ಸದಸ್ಯ ಕಾರ್ಯದರ್ಶಿ)
ಸುಮಂತ್ – ತಹಶೀಲ್ದಾರ್, ಪ್ರಾದೇಶಿಕ ಆಯುಕ್ತರ ಕಚೇರಿ (ಸದಸ್ಯರು)
ಶಶಾಂಕ್ – ಶಿರಸ್ತೇದಾರ್, ಪ್ರಾದೇಶಿಕ ಆಯುಕ್ತರ ಕಚೇರಿ (ಸದಸ್ಯರು)
ಚರಣ್ ರಾಜ್ – ಶಿರಸ್ತೇದಾರ್, ಪ್ರಾದೇಶಿಕ ಆಯುಕ್ತರ ಕಚೇರಿ (ಸದಸ್ಯರು)

