ಕೊಪ್ಪಳ: ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧರ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾರ್ಖಾನೆಯ ಕಬ್ಬಿಣದ ಗೇಟ್ ಮುರಿದು ರೈತರು ಕಾರ್ಖಾನೆ ಒಳಹ್ಗೆ ನುಗ್ಗಿದ್ದಾರೆ.
ಬಲ್ಡೋಟಾ ಕಾರ್ಖಾನೆ ತೆರವುಗೊಳಿಸುವಂತೆ ರೈತರು ಧರಣಿ ನಡೆಸಿದ್ದು, ಇದೀಗ ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಬಲ್ಡೋಟಾ ಕಾರ್ಖಾನೆಯೊಳಗಿರುವ ಕೆರೆಯನ್ನು ಸಾರ್ವಜನಿಕ ಮುಕ್ತ ಮಾಡುವಂತೆ ಆಗ್ರಹಿಸಿ ರೈತರು ಇಂದು ಧರಣಿ ನಡೆಸಿದ್ದರು, ಈ ಧರಣಿ ವಿಕೋಪಕ್ಕೆ ತಿರುಗಿದ್ದು, ರೈತರ ಸಹನೆಯ ಕಟ್ತೆಯೊಡೆದಿದೆ. ಆಕ್ರೋಶಭರಿತ ರೈತರು ಕಾರ್ಖಾನೆಯ ಕಬ್ಬಿಣದ ಡೋರ್ ಮುರಿದು ಕಾರ್ಖಾನೆಗೆ ನುಗ್ಗಿದ್ದಾರೆ.
ಇನ್ನು ಪ್ರತಿಭಟನೆ ವೇಳೆ ಏಕಾಏಕಿ ರೈತ ಯಮನೂರಪ್ಪ ಕೆರೆಗೆ ಹಾರಿದ್ದು, ಬಳಿಕ ಈಜಿ ದಡ ಸೇರಿದ್ದಾರೆ. ಪ್ರತಿಭಟನೆ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಸ್ಥಳಕ್ಕೆ ಬಳ್ಳಾರಿ ವಲಯ ಐಜಿಪಿ ಹರ್ಷ ದೌಡಾಯಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಬಸಾಪೂರ ಬಳಿ ನಡೆಯುತ್ತಿರುವ ಸುಮಾರು ₹54,000 ಕೋಟಿ ವೆಚ್ಚದ ಬಲ್ಡೋಟಾ ಉಕ್ಕಿನ ಕಾರ್ಖಾನೆಯ ವಿಸ್ತರಣೆಯನ್ನು ವಿರೋಧಿಸಿ ಸ್ಥಳೀಯ ರೈತರು, ಜನಸಾಮಾನ್ಯರು ಮತ್ತು ಪರಿಸರ ಹಿತರಕ್ಷಣಾ ಸಮಿತಿಯು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಈ ವಿಸ್ತರಣೆಯಿಂದ ತೀವ್ರ ವಾಯು ಹಾಗೂ ಜಲ ಮಾಲಿನ್ಯ ಉಂಟಾಗಿ ಕೃಷಿ ಮತ್ತು ಜನರ ಆರೋಗ್ಯಕ್ಕೆ ಅಪಾಯವಾಗಲಿದೆ ಎಂಬುದು ಮುಖ್ಯ ಆರೋಪವಾಗಿದೆ.
ಕಾರ್ಖಾನೆಯಿಂದ ಹತ್ತಿರದ ಗ್ರಾಮಗಳು ಮತ್ತು ಕೊಪ್ಪಳ ನಗರದ ಸುತ್ತಮುತ್ತಲಿನ ಪರಿಸರ ಹಾಳಾಗುವ ಆತಂಕ ಎದುರಾಗಿದೆ. ಅಕ್ಕಪಕ್ಕದ ರೈತರ ಜಮೀನುಗಳು, ಬೆಳೆಗಳು ಮತ್ತು ಜಾನುವಾರುಗಳಿಗೆ ತೊಂದರೆಯಾಗುತ್ತವೆ. ಕಾರ್ಖಾನೆಯ ವಿಸ್ತರಣೆಯಿಂದ ಉಂಟಾಗುವ ವಿಷಕಾರಿ ಹೊಗೆ ಹಾಗೂ ತ್ಯಾಜ್ಯದಿಂದ ಜನರ ಆರೋಗ್ಯ ಹದಗೆಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

