ವಾಷಿಂಗ್ಟನ್: ತಂತ್ರಜ್ಞಾನ ಲೋಕದ ದೈತ್ಯ ಆ್ಯಪಲ್ ಕಂಪನಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. ದೀರ್ಘಕಾಲದಿಂದ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಟಿಮ್ ಕುಕ್ (Tim Cook) ಅವರು ಸಿಇಒ ಹುದ್ದೆಯಿಂದ ಕೆಳಗಿಳಿಯುತ್ತಿದ್ದು, ಅವರ ಸ್ಥಾನಕ್ಕೆ ಕಂಪನಿಯ ಹಿರಿಯ ಉಪಾಧ್ಯಕ್ಷ ಜಾನ್ ಟೆರ್ನಸ್ (John Ternus) ನೇಮಕಗೊಂಡಿದ್ದಾರೆ.
ಬದಲಾವಣೆ ಯಾವಾಗ?
ಟಿಮ್ ಕುಕ್ ಅವರು ಸೆಪ್ಟೆಂಬರ್ 1 ರಂದು ಅಧಿಕಾರ ಹಸ್ತಾಂತರಿಸಲಿದ್ದಾರೆ. ಕುಕ್ ಅವರು ಸಂಪೂರ್ಣವಾಗಿ ಕಂಪನಿ ಬಿಡುತ್ತಿಲ್ಲ, ಬದಲಾಗಿ ಅವರು ‘ಕಾರ್ಯನಿರ್ವಾಹಕ ಅಧ್ಯಕ್ಷರಾಗಿ’ (Executive Chairman) ಮುಂದುವರಿಯಲಿದ್ದಾರೆ.
ಯಾರು ಈ ಜಾನ್ ಟೆರ್ನಸ್?
ಅನುಭವ: 2001ರಲ್ಲಿ ಆ್ಯಪಲ್ ಸೇರಿದ ಇವರು ಕಳೆದ 20 ವರ್ಷಗಳಿಂದ ಕಂಪನಿಯಲ್ಲೇ ಇದ್ದಾರೆ.
ಪಾತ್ರ: ಸದ್ಯ ಹಾರ್ಡ್ವೇರ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿರುವ ಇವರು, ಐಫೋನ್, ಮ್ಯಾಕ್, ಐಪ್ಯಾಡ್ ಮತ್ತು ಆ್ಯಪಲ್ ವಾಚ್ಗಳ ವಿನ್ಯಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಶಿಕ್ಷಣ: ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಆ್ಯಪಲ್ಗೆ ಟೆರ್ನಸ್ ಯಾಕೆ ಮುಖ್ಯ?
AI ಕ್ರಾಂತಿ: ಮುಂದಿನ ದಿನಗಳಲ್ಲಿ ಆ್ಯಪಲ್ ಉತ್ಪನ್ನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಸಂಯೋಜಿಸಲು ಟೆರ್ನಸ್ ಅವರ ಎಂಜಿನಿಯರಿಂಗ್ ಜ್ಞಾನ ಕಂಪನಿಗೆ ಬಲ ನೀಡಲಿದೆ.
ಉತ್ಪನ್ನ ಕೇಂದ್ರಿತ ನಾಯಕ: ಟಿಮ್ ಕುಕ್ ಅವರು ಕಂಪನಿಯ ವ್ಯವಹಾರ ಮತ್ತು ಪೂರೈಕೆ ಸರಪಳಿಯನ್ನು (Supply Chain) ಬಲಪಡಿಸಿದ್ದರು. ಆದರೆ ಟೆರ್ನಸ್ ಅವರು ಪ್ರಾಡಕ್ಟ್ ವಿನ್ಯಾಸಕ್ಕೆ ಹೆಚ್ಚು ಒತ್ತು ನೀಡುವ ‘ಪ್ರಾಡಕ್ಟ್ ಮ್ಯಾನ್’ ಎಂದು ಹೆಸರಾಗಿದ್ದಾರೆ.
ಸೊಂತ ಚಿಪ್ಗಳು: ಆ್ಯಪಲ್ ತನ್ನದೇ ಆದ ಸಿಲಿಕಾನ್ ಚಿಪ್ಗಳಿಗೆ ಬದಲಾಗುವಲ್ಲಿ ಟೆರ್ನಸ್ ಅವರ ಶ್ರಮ ದೊಡ್ಡದಿದೆ.
2011ರಲ್ಲಿ ಸ್ಟೀವ್ ಜಾಬ್ಸ್ ಅವರಿಂದ ಅಧಿಕಾರ ವಹಿಸಿಕೊಂಡ ಕುಕ್, ಕಂಪನಿಯ ಮಾರುಕಟ್ಟೆ ಮೌಲ್ಯವನ್ನು ಸುಮಾರು $4 ಟ್ರಿಲಿಯನ್ಗೆ ಏರಿಸಿದ ಕೀರ್ತಿ ಹೊಂದಿದ್ದಾರೆ.

