ಬಾಂಗ್ಲಾದೇಶ : ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗೆ ಕೇವಲ 48 ಗಂಟೆಗಳಿರುವಾಗ ಭೀಕರ ಘಟನೆಯೊಂದು ಸಂಭವಿಸಿದೆ. ಮೈಮನ್ ಸಿಂಗ್ ಜಿಲ್ಲೆಯ ತ್ರಿಶಾಲ ಎಂಬಲ್ಲಿ 62 ವರ್ಷದ ಹಿಂದೂ ಅಕ್ಕಿ ವ್ಯಾಪಾರಿ ಸುಷೇನ್ ಚಂದ್ರ ಸರ್ಕಾರ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಅವರ ಅಂಗಡಿಯಲ್ಲೇ ಇರಿದು ಕೊಲೆ ಮಾಡಿದ್ದಾರೆ.
ಹೌದು. ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಗೂ ಕೆಲವೇ ದಿನಗಳು ಬಾಕಿ ಇರುವಾಗ, ಮೈಮನ್ ಸಿಂಗ್ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಹಿಂದೂ ಉದ್ಯಮಿಯೊಬ್ಬರನ್ನು ಅವರ ಅಂಗಡಿಯಲ್ಲೇ ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ತ್ರಿಶಾಲ ಉಪಜಿಲೆಯ ಬೋಗರ್ ಬಜಾರ್ ಜಂಕ್ಷನ್ನಲ್ಲಿರುವ ‘ಮೆಸರ್ಸ್ ಭಾಯಿ ಭಾಯಿ ಎಂಟರ್ಪ್ರೈಸಸ್’ ಎಂಬ ಅಕ್ಕಿ ಅಂಗಡಿಯ ಮಾಲೀಕ ಸುಷೇನ್ ಚಂದ್ರ ಸರ್ಕಾರ್ (62) ಎಂದು ಗುರುತಿಸಲಾಗಿದೆ. ಇವರು ಸ್ಥಳೀಯ ದಕ್ಷಿಣಕಾಂಡ ಗ್ರಾಮದ ನಿವಾಸಿಯಾಗಿದ್ದರು.
ಪೊಲೀಸರ ಪ್ರಕಾರ, ಈ ಘಟನೆಯು ರಾತ್ರಿ ಸೋಮವಾರ ಸುಮಾರು 11:00 ಗಂಟೆಗೆ ಸಂಭವಿಸಿದೆ. ಸುಷೇನ್ ಚಂದ್ರ ಅವರು ತಮ್ಮ ಅಂಗಡಿಯಲ್ಲಿದ್ದಾಗ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹತ್ಯೆಯ ನಂತರ, ಆರೋಪಿಗಳು ಶವವನ್ನು ಅಂಗಡಿಯ ಒಳಗೇ ಬಿಟ್ಟು, ಶಟರ್ ಎಳೆದು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ತ್ರಿಶಾಲ ಪೊಲೀಸ್ ಠಾಣೆಯ ಅಧಿಕಾರಿ ಮುಹಮ್ಮದ್ ಫಿರೋಜ್ ಹೊಸೈನ್ ಅವರು ಘಟನೆಯನ್ನು ಖಚಿತಪಡಿಸಿದ್ದು, “ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ತನಿಖೆ ಆರಂಭಿಸಲಾಗಿದೆ” ಎಂದು ತಿಳಿಸಿದ್ದಾರೆ. ಈ ಕೊಲೆಯ ಹಿಂದಿನ ಉದ್ದೇಶವೇನೆಂದು ಇನ್ನೂ ತಿಳಿದುಬಂದಿಲ್ಲ, ಆದರೆ ಎಲ್ಲಾ ಆಯಾಮಗಳಿಂದಲೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

