ಬೆಂಗಳೂರು ನಗರದಲ್ಲಿ ಎಟಿಎಂಗೆ ಹಣ ಸಾಗಣೆ ಮಾಡುತ್ತಿದ್ದ ವಾಹನವನ್ನು ಹಾಡ ಹಗಲೇ ದರೋಡೆ ಮಾಡಿ 7.11 ಕೋಟಿ ರೂ. ದೋಚಲಾಗಿತ್ತು. ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ನಡೆದ ಈ ಘಟನೆ ಬೆಂಗಳೂರನ್ನೇ ಬೆಚ್ಚಿಬೀಳಿಸಿತ್ತು. ಈ ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರದಿಂದ ಬೆಂಗಳೂರು ನಗರದಲ್ಲಿ ಮತ್ತೊಂದು ಎಟಿಎಂ ದರೋಡೆ ನಡೆದಿದೆ ಎಂಬ ಸುದ್ದಿಗಳು ವೈರಲ್ ಆಗಿದೆ. ಜನರು ಪೊಲೀಸರು, ಗೃಹ ಸಚಿವರ ಕಾರ್ಯ ವೈಖರಿ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದಾರೆ.
ಆದರೆ ಈ ಕುರಿತು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಎಟಿಎಂಗೆ ಹಾಕುವ ಹಣವನ್ನು ತೆಗೆದುಕೊಂಡು ಹೋದ ಘಟನೆ ಇದಾಗಿದ್ದು, ಸದರಿ ಪ್ರಕರಣ ನಂಬಿಕೆ ದ್ರೋಹ/ ವಂಚನೆ ಪ್ರಕರಣವಾಗಿದೆ. ಯಾವುದೇ ದರೋಡೆಯ ಪ್ರಕರಣವಾಗಿರುವುದಿಲ್ಲ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಪೊಲೀಸರ ಸ್ಪಷ್ಟನೆಗಳು: ಪೊಲೀಸರು ಬಿಡುಗಡೆ ಮಾಡಿರುವ ಪ್ರಕಟಣೆಯು ಬ್ಯಾಂಕ್‌ನಿಂದ ಎಟಿಎಂ ಮಿಷನ್‌ಗಳಿಗೆ ಭರ್ತಿ ಮಾಡಬೇಕಾಗಿದ್ದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದಿನಾಂಕಗಳಂದು ಖಾಸಗಿ ಕಂಪನಿಯಲ್ಲಿ ಎಟಿಎಂಗಳಿಗೆ ಹಣವನ್ನು ಡೆಪಾಸಿಟ್ ಮಾಡುವ ಕೆಲಸವನ್ನು ನಿರ್ವಹಿಸಿಕೊಂಡಿರುವ ಇಬ್ಬರು ದೂರುದಾರರು ಪ್ರತ್ಯೇಕವಾಗಿ ಎರಡು ದೂರುಗಳನ್ನು ಸಲ್ಲಿಸಿರುತ್ತಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ದೂರಿನಲ್ಲಿ ಈ ಕೆಲಸ ನಿರ್ವಹಿಸಲು ಕೆಲವು ವ್ಯಕ್ತಿಗಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದು, ಆ ವ್ಯಕ್ತಿಗಳು ಕೋರಮಂಗಲ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಕರೆನ್ಸಿ ಚೆಸ್ಟ್‌ನಿಂದ, ಎಟಿಎಂಗಳಿಗೆ ಹಣ ತುಂಬುವ ಸಲುವಾಗಿ ಸುಮಾರು ಒಂದೂವರೆ ವರ್ಷಗಳ ಅವಧಿಯಲ್ಲಿ ಹಣ ಪಡೆದು ಕೊಳ್ಳುತ್ತಾ, ನಿಗದಿಪಡಿಸಿದ ಎಟಿಎಂಗಳಿಗೆ ಹಣ ತುಂಬುವ ಕೆಲಸವನ್ನು ಮಾಡುತ್ತಿರುತ್ತಾರೆ.
ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಗಳು ಬ್ಯಾಂಕಿನಿಂದ ಹಣ ಪಡೆದುಕೊಂಡು ಈ ಹಣದಲ್ಲಿ ಅಲ್ಪ ಮೊತ್ತದ ಹಣವನ್ನು ಎಟಿಎಂಗಳಿಗೆ ಹಾಕದೇ ತಮ್ಮ ಸ್ವಂತಕ್ಕೆ ಬಳಸಿಕೊಂಡು 2024ನೇ ಸಾಲಿನಿಂದ 2025ನೇ ಸಾಲಿನವರೆಗೂ ದೂರುದಾರರಿಗೆ ಮತ್ತು ಬ್ಯಾಂಕ್‌ಗೆ ತಿಳಿಯದಂತೆ ಮರೆಮಾಚಿ, ವಂಚನೆ ಮಾಡಿ ಓರ್ವ ಸುಮಾರು ರೂ. 80,49,000 ಹಣವನ್ನು ಮತ್ತು ಮತ್ತೋರ್ವ ಸುಮಾರು ರೂ. 57,00,000 ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆಂದು ತಿಳಿಸಿರುತ್ತಾರೆ.
ಈ ಕುರಿತು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ವಂಚನೆ ಪ್ರಕರಣಗಳು ದಾಖಲಾಗಿರುತ್ತದೆ. ಸದರಿ ಪ್ರಕರಣವು ನಂಬಿಕೆ ದ್ರೋಹ/ ವಂಚನೆ ಪ್ರಕರಣವಾಗಿದ್ದು, ಯಾವುದೇ ದರೋಡೆಯ ಪ್ರಕರಣವಾಗಿರುವುದಿಲ್ಲ, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
2025ರ ನವೆಂಬರ್‌ನಲ್ಲಿ ನಗರದಲ್ಲಿ ನಡೆದಿದ್ದ 7.11 ಕೋಟಿ ರೂ. ರಾಬರಿ ಪ್ರಕರಣ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿತ್ತು. ಈ ದರೋಡೆ ಮಾಡಲು 3 ತಿಂಗಳಿಂದ ಗ್ಯಾಂಗ್ ಸ್ಕೆಚ್ ಹಾಕಿತ್ತು. ಈ ಸಂಚನ್ನು ರೂಪಿಸಿದವರಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಸಹ ಸೇರಿದ್ದ.
ಅಲ್ಲದೆ ಎಟಿಎಂಗೆ ಹಣ ತುಂಬುವ ಏಜೆನ್ಸಿಯಾದ ಸಿಎಂಎಸ್ ವಾಹನದ ಮಾಜಿ ಉದ್ಯೋಗಿ ಕ್ಸೇವಿಯರ್ ಮತ್ತು ಆತನ ಸಹಚರರು ಭಾಗಿಯಾಗಿದ್ದರು. ಈ ಘಟನೆ ಬಳಿಕ ಮತ್ತೊಂದು ಎಟಿಎಂ ದರೋಡೆ ನಡೆದಿದೆ ಎಂಬ ಸುದ್ದಿಗಳು ಮಂಗಳವಾರದಿಂದ ಹರಿದಾಡುತ್ತಿದ್ದವು. ಇದಕ್ಕೆ ಪೊಲೀಸರು ಸ್ಪಷ್ಟನೆ ಕೊಟ್ಟಿದ್ದಾರೆ.

