ಇತ್ತೀಚಿನ ದಿನಗಳಲ್ಲಿ ಯುವ ವಯಸ್ಸಿನವರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದ್ದು, ಇದೇ ರೀತಿಯ ಒಂದು ದುರದೃಷ್ಟಕರ ಘಟನೆ ಆಂಧ್ರಪ್ರದೇಶದಲ್ಲಿ ವರದಿಯಾಗಿದೆ. ತರಗತಿಯಲ್ಲಿ ಪಾಠ ಕೇಳುತ್ತಿದ್ದ 15 ವರ್ಷದ ವಿದ್ಯಾರ್ಥಿನಿ ಹಠಾತ್ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.
ಈ ಘಟನೆ ಡಿಸೆಂಬರ್ 13 ರಂದು ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ರಾಮಚಂದ್ರಪುರಂನಲ್ಲಿರುವ ಒಂದು ಖಾಸಗಿ ಶಾಲೆಯಲ್ಲಿ ನಡೆದಿದೆ ಎನ್ನಲಾಗಿದೆ. ಮೃತ ವಿದ್ಯಾರ್ಥಿನಿಯನ್ನು 10ನೇ ತರಗತಿಯ ವಿದ್ಯಾರ್ಥಿನಿಯಾದ ನಲ್ಲಮಿಲ್ಲಿ ಸಿರಿ ಎಂದು ಗುರುತಿಸಲಾಗಿದೆ.
ತರಗತಿಯಲ್ಲೇ ಕುಸಿದು ಬಿದ್ದ ಸಿರಿ
ಈ ಘಟನೆಯ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಸಿರಿ ತನ್ನ ತರಗತಿಯ ಕೋಣೆಯಲ್ಲಿ ಬೆಂಚ್ ಮೇಲೆ ಕುಳಿತು ಶಿಕ್ಷಕರ ಪಾಠವನ್ನು ಗಮನವಿಟ್ಟು ಕೇಳುತ್ತಿದ್ದಾಳೆ. ಕೆಲವೇ ಕ್ಷಣಗಳಲ್ಲಿ ಆಕೆ ಇದ್ದಕ್ಕಿದ್ದಂತೆ ಕುಸಿದು ನೆಲಕ್ಕೆ ಬಿದ್ದಿದ್ದಾಳೆ.
ಸಿರಿ ಕುಸಿದು ಬೀಳುತ್ತಿದ್ದಂತೆ ತಕ್ಷಣವೇ ಎಚ್ಚೆತ್ತ ಶಾಲಾ ಸಿಬ್ಬಂದಿ ಮತ್ತು ಶಿಕ್ಷಕರು ವಿದ್ಯಾರ್ಥಿನಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಧಾವಿಸಿದ್ದಾರೆ. ಆದರೆ, ವೈದ್ಯರು ಪರೀಕ್ಷಿಸಿ, ಆಕೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ರಾಮಚಂದ್ರಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಇತ್ತೀಚಿನ ಜೀವನಶೈಲಿಯ ಬದಲಾವಣೆಗಳು, ಅಧಿಕ ಒತ್ತಡ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಯುವಜನರಲ್ಲಿಯೂ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತಿರುವುದು ತಜ್ಞರಲ್ಲಿ ಆತಂಕ ಮೂಡಿಸಿದೆ. ಯುವ ವಯಸ್ಸಿನ ಮಕ್ಕಳಲ್ಲಿ ಇಂತಹ ದುರಂತಗಳು ಸಂಭವಿಸುವುದು ಪೋಷಕರಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕಳವಳಕ್ಕೆ ಕಾರಣವಾಗಿದೆ.

